ನಾಳೆಯಿಂದ ದಿನಕ್ಕೆ 20 ಸಾವಿರ ರೆಮಿಡಿಸಿವರ್ ಡೋಸ್ ಪೂರೈಕೆಗೆ ತಯಾರಕರ ಸಮ್ಮತಿ -ಡಿಸಿಎಂ ಡಾ. ಅಶ್ವತ್ಥನಾರಾಯಣ

ಬೆಂಗಳೂರು: ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮಿಡಿಸಿವರ್ ಕೊರತೆ ನೀಗಿಸುವ ನಿಟ್ಟಿನಲ್ಲಿ ನಾಳೆಯಿಂದ (ಮೇ 6) ದಿನಕ್ಕೆ 20 ಸಾವಿರ ರೆಮಿಡಿಸಿವರ್ ಡೋಸ್‍ಗಳನ್ನು ಪೂರೈಸಲು ನಾಲ್ಕು ಔಷಧ ಕಂಪನಿಗಳು ಒಪ್ಪಿಕೊಂಡಿವೆ ಎಂದು ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಈ ಕುರಿತು ಅಧಿಕಾರಿಗಳ ಸಭೆ ನಡೆಸಿದ ಡಿಸಿಎಂ ಅವರು ಚರ್ಚೆಯ ನಡುವೆಯೇ ರೆಮಿಡಿಸಿವರ್ ಸೇರಿ ವಿವಿಧ ಔಷಧಗಳನ್ನು ಒದಗಿಸುತ್ತಿರುವ ನಾಲ್ಕು ಕಂಪನಿಗಳಾದ ಮೈಲಾನ್, ಸಿಪ್ಲಾ, ಜ್ಯುಬಿಲಿಯೆಂಟ್ ಹಾಗೂ ಸಿಂಜಿನ್ ಕಂಪನಿಗಳ ಮುಖ್ಯಸ್ಥರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಮುಂದಿನ ಐದು ದಿನದ ಬೇಡಿಕೆ ಹಾಗೂ ತದನಂತರದ ಬೇಡಿಕೆ ದೃಷ್ಟಿಯಲ್ಲಿಟ್ಟುಕೊಂಡು ಹೆಚ್ಚಿನ ಪ್ರಮಾಣದ ಔಷಧಿಯನ್ನು ಮೊದಲೇ ಪೂರೈಕೆ ಮಾಡುವಂತೆ ಕೋರಿದ್ದೇನೆ. ಎಲ್ಲ ಕಂಪನಿಗಳ ಮುಖ್ಯಸ್ಥರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ಡಿಸಿಎಂ ಹೇಳಿದರು.
ಈಗ ದಿನಕ್ಕೆ 10,000 ಡೋಸ್ ರೆಮಿಡಿಸಿವರ್ ಅನ್ನು ಈ ಕಂಪನಿಗಳು ಪೂರೈಕೆ ಮಾಡುತ್ತಿವೆ. ನಾಳೆಯಿಂದ ದಿನಕ್ಕೆ ಕನಿಷ್ಠ 20,000 ಡೋಸ್ ರೆಮಿಡಿಸಿವರ್ ಅನ್ನು ಪೂರೈಕೆ ಮಾಡುವಂತೆ ಕೋರಿದೆ. ಅದಕ್ಕೆ ಕಂಪನಿಗಳು ಒಪ್ಪಿವೆ. ಈ ತಿಂಗಳ 9ನೇ ತಾರೀಖಿನ ನಂತರ ದಿನಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯ ರೆಮಿಡಿಸಿವರ್ ಡೋಸ್ ರಾಜ್ಯಕ್ಕೆ ಹಂಚಿಕೆ ಮಾಡುವಂತೆ ಕೋರಲಾಗಿದೆ. ಜಾಗತಿಕ ಟೆಂಡರ್ ಕರೆದಿದ್ದು ಒಂದು ವಾರದಲ್ಲಿ ಅದು ಕೂಡ ಅಂತಿಮವಾಗಲಿದೆ ಎಂದು ಡಿಸಿಎಂ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.
ರೆಮಿಡಿಸಿವರ್ ಬಳಕೆಯಲ್ಲಿ ಪಾರದರ್ಶಕತೆ: ಈವರೆಗೆ ರೆಮಿಡಿಸಿವರ್ ಬಗ್ಗೆ ಕೊರತೆ ಎಂದು ಎಲ್ಲರೂ ಕೇಳಿದ್ದೀರಿ. ಇನ್ನು ಮುಂದೆ ಈ ಮಾತಿಗೆ ಅವಕಾಶವೇ ಇರುವುದಿಲ್ಲ. ಎಷ್ಟು ಬೇಕೋ ಅಷ್ಟೂ ರೆಮಿಡಿಸಿವರ್ ಅನ್ನು ಸರಕಾರದ ಪಡೆದುಕೊಂಡು ವೈಜ್ಞಾನಿಕವಾಗಿ ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಲಿದೆ. ಎಷ್ಟು ಡೋಸ್ ಬಂದಿದೆ? ಎಷ್ಟು ಖರ್ಚಾಗಿದೆ? ಎಷ್ಟು ಉಳಿದಿದೆ? ಎಂಬ ಲೈವ್ ಸ್ಟೇಟಸ್ ಜತೆಗೆ, ಈ ಚುಚ್ಚುಮದ್ದು ಯಾರು ಪಡೆದರು? ಯಾರಿಗೆ ಎಷ್ಟು ಡೋಸ್ ನೀಡಲಾಗಿದೆ? ಎಂಬೆಲ್ಲ ಅಂಶಗಳು ಪಬ್ಲಿಕ್ ಡೊಮೈನ್‍ನಲ್ಲಿ ಮುಕ್ತವಾಗಿ ಪ್ರಕಟಿಸಲಾಗುವುದು. ಯಾವುದೇ ಮಾಹಿತಿಯನ್ನು ಮುಚ್ಚಿಡುವುದಿಲ್ಲ ಎಂದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಸಿಬ್ಬಂದಿ ಕೊರತೆಯಾಗಂತೆ ಕ್ರಮ: ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಎಂಬಿಬಿಎಸ್ ಸೇರಿ ವಿವಿಧ ವಿಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 17,797 ಹೆಚ್ಚು ದ್ವಿತೀಯ & ಅಂತಿಮ ವರ್ಷದ ವಿದ್ಯಾರ್ಥಿಗಳಿದ್ದು (ಇಂಟರ್ನಿಗಳೂ ಸೇರಿ), ಇವರ ಸೇವೆಯನ್ನು ಕೋವಿಡ್ ನಿರ್ವಹಣೆಗೆ ಬಳಸಿಕೊಳ್ಳುವ ನಿರ್ಧಾರ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಹೇಳಿದರು.
ಇದರ ಜತೆಗೆ, ದಂತ ವ್ಯದ್ಯ ವಿಭಾಗದಲ್ಲಿ 5,000 ಹಾಗೂ ಆಯುμï ವಿಭಾಗದಲ್ಲಿ 9,000, ಫಾರ್ಮಸಿ 9,900, ಇತರೆ ವಿಭಾಗದಲ್ಲಿ 10,000 ಹಾಗೂ ನಸಿರ್ಂಗ್‍ನಲ್ಲಿ 45,470 ಅಂತಿಮ-ಪಿಜಿ & ಇಂಟರ್ನಿ ವಿದ್ಯಾರ್ಥಿಗಳಿದ್ದು, ಇವರೆಲ್ಲರ ಸೇವೆಯನ್ನೂ ಈ ಪಿಡುಗಿನ ವಿರುದ್ಧ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.