ಬೆಂಗಳೂರು: ಲಸಿಕೆ ವಿಚಾರದಲ್ಲಿ ಸುಳ್ಳು ಮಾಹಿತಿ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರಿಗೆ ದ್ರೋಹವೆಸಗಿವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸರಕಾರಗಳ ಧೋರಣೆ ಖಂಡಿಸಿ ವಿಕಾಸಸೌಧ ಆವರಣದ ಗಾಂಧಿ ಪ್ರತಿಮೆ ಮುಂಭಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಬುಧವಾರ ಸಾಂಕೇತಿವಾಗಿ ಪ್ರತಿಭಟನೆ ನಡೆಸಿದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿಯಾಗಿ 13 ವರ್ಷ, ಪ್ರಧಾನಿಯಾಗಿ ಏಳು ವರ್ಷಗಳ ಅನುಭವವಿದೆ. ಆದರೂ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
ಲಸಿಕೆ ಲಭ್ಯ ಇಲ್ಲ ಎಂದಾದರೆ ಎಲ್ಲರಿಗೂ ಹಾಕುವುದಾಗಿ ಏಕೆ ಹೇಳಬೇಕಿತ್ತು. ರಾಜ್ಯದಲ್ಲಿ ಅಭಿಯಾನಕ್ಕೆ ಚಾಲನೆ ನೀಡುವ ಅಗತ್ಯವಾದರೂ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಆಕ್ಸಿಜನ್ ಸಿಗದೆ ಸೋಂಕಿತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಸೋಂಕು ವ್ಯಾಪಕವಾಗಿದ್ದು, ಎರಡನೇ ಅಲೆ ತೀವ್ರವಾಗಿ ಬಾಧಿಸುತ್ತಿದೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ಮಾಹಿತಿ ಇತ್ತು. ತಜ್ಞರೂ ಸಹ ವರದಿ ನೀಡಿದ್ದರು. ಆದರೆ ತಜ್ಞರ ವರದಿಯನ್ನು ಉಭಯ ಸರಕಾರಗಳು ಉದಾಸೀನ ಮಾಡಿ, ಸಲಹೆಗಳನ್ನು ನಿರ್ಲಕ್ಷಿಸಿದವು. ಅದರ ಪರಿಣಾಮವಾಗಿ ಕೆಟ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಅವರು ಹೇಳಿದರು.
ದೇಶ ಮತ್ತು ರಾಜ್ಯ ಇಂತಹ ಸ್ಥಿತಿಗೆ ಬರಲು ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವವರೇ ನೇರ ಹೊಣೆಗಾರರು. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಈಗ ಮಾಡುತ್ತಿದ್ದಾರೆ. ತಜ್ಞರೂ ಸರಕಾರದ ನಿರ್ಲಕ್ಷ್ಯ ಧೋರಣೆ ನೋಡಿ ಮೌನಕ್ಕೆ ಶರಣಾಗಿದ್ದಾರೆ ಎಂದು ಮಾಜಿ ಸಿಎಂ ಆರೋಪಿಸಿದರು.
ಸರಕಾರಗಳು ಸತ್ತಿರುವುದರಿಂದಲೇ ನ್ಯಾಯಾಲಯಗಳು ಮಧ್ಯೆ ಪ್ರವೇಶ ಮಾಡಿವೆ. ಈಗಲಾದರೂ ಕೇಂದ್ರ ಸರಕಾರ ಎಚ್ಚೆತ್ತು ಲಸಿಕೆ ಸಂಗ್ರಹಕ್ಕೆ ಮುಂದಾಗಲಿ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕಾಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ವಿ.ಮುನಿಯಪ್ಪ, ಸೀತಾರಾಂ, ಕೃಷ್ಣ ಬೈರೇಗೌಡ, ನಸೀರ್ ಅಹಮದ್, ದಿನೇಶ್ ಗುಂಡೂರಾವ್, ಎಚ್.ಎಂ. ರೇವಣ್ಣ, ಸಂಸದ ಜಿ.ಸಿ. ಚಂದ್ರಶೇಖರ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಶಾಸಕರಾದ ಬೈರತಿ ಸುರೇಸ್, ಸೌಮ್ಯಾ ರೆಡ್ಡಿ, ರಿಜ್ವಾನ್ ಅರ್ಷದ್, ಹ್ಯಾರೀಸ್, ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವ್ಯಾಕ್ಸಿನ್ ವಿಚಾರದಲ್ಲಿ ಕೇಂದ್ರ-ರಾಜ್ಯ ಸರಕಾರಗಳು ಜನರಿಗೆ ಸುಳ್ಳು ಹೇಳುತ್ತಿವೆ -ಸಿದ್ದರಾಮಯ್ಯ

