ಬೆಂಗಳೂರು: ಶಾಲಾ ವಿದ್ಯಾರ್ಥಿಗಳಿಗೆ ನೀಡಬೇಕಾದ ಬಾಕಿ ಉಳಿದಿರುವ ಅಹಾರ ಧಾನ್ಯಗಳನ್ನು ಮೇ ತಿಂಗಳ ಅಂತ್ಯದೊಳಗೆ ಪೂರ್ಣವಾಗಿ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಬುಧವಾರ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಹಾರದ ಬದಲಿಗೆ ನೀಡಲಾಗುತ್ತಿದ್ದ ಬಾಕಿ ಉಳಿದಿರುವ ಅಡುಗೆ ಎಣ್ಣೆ ಸೇರಿ ಆಹಾರ ಧಾನ್ಯಗಳನ್ನು ಲಾಕ್ಡೌನ್ ಅವಧಿ ಮುಗಿದ ತಕ್ಷಣವೇ ವಿತರಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.
ಈ ಆಹಾರ ಧಾನ್ಯಗಳಿಗೆ ಈಗಾಗಲೇ ಹಣ ಬಿಡುಗಡೆ ಮಾಡಲಾಗಿದೆ. ಪೂರ್ಣ ದಿನಗಳಿಗೆ ವಿತರಣೆ ಮಾಡಲು ಅಗತ್ಯವಿರುವ ಆಹಾರ ಧಾನ್ಯ ಕೆಎಸ್ ಎಫ್ ಸಿ ಗೋದಾಮುಗಳಲ್ಲಿ ಏಕಕಾಲದಲ್ಲಿ ಸಂಗ್ರಹಣೆ ಮಾಡಿ ಎತ್ತುವಳಿ ಮಾಡಲು ಕಷ್ಟಸಾಧ್ಯ ಆಗಿರುವುದರಿಂದ ಎರಡು ಹಂತಗಳಲ್ಲಿ ವಿತರಿಸಲು ತೀರ್ಮಾನಿಸಿ ಈಗಾಗಲೇ ಒಂದು ಹಂತದ ವಿತರಣೆ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಮೊದಲ ಹಂತದ 108 ದಿನಗಳ ಆಹಾರ ಧಾನ್ಯಗಳನ್ನು ಎಲ್ಲ ಶಾಲೆಗಳಿಗೆ ವಿತರಿಸಲಾಗಿದೆ. ಉಳಿದ ಅವಧಿಯಾದ 2021ರ ನವೆಂಬರ್ ನಿಂದ 2021ಮಾರ್ಚ್ ವರೆಗಿನ 132 ದಿನಗಳಿಗೆ ಸಂಬಂಧಿಸಿದ ಆಹಾರ ಧಾನ್ಯಗಳನ್ನು ಕೆಲ ಶಾಲೆಗಳಿಗೆ ವಿತರಿಸಲಾಗಿದೆ. ಲಾಕ್ಡೌನ್ ಘೋಷಣೆಯಾದ್ದರಿಂದ ಕೆಲ ಶಾಲೆಗಳಿಗೆ ಎರಡನೇ ಹಂತದ ಆಹಾರ ಧಾನ್ಯಗಳನ್ನು ವಿತರಿಸಲು ಸಾಧ್ಯವಾಗಿಲ್ಲ. ಲಾಕ್ಡೌನ್ ಮುಗಿದ ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿ ಉಳಿದ ಶಾಲೆಗಳಿಗೆ ಮೇ ಅಂತ್ಯದೊಳಗೆ ವಿತರಿಸಲು ಸೂಚನೆ ನೀಡಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.
ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ.ಅನ್ಬುಕುಮಾರ್, ಮಧ್ಯಾಹ್ನ ಉಪಹಾರ ಯೋಜನೆ ಅಧಿಕಾರಿಗಳು ಸೇರಿದಂತೆ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಲಾಕ್ಡೌನ್ ಮುಗಿದ ಮೇಲೆ ವಿದ್ಯಾರ್ಥಿಗಳಿಗೆ ಆಹಾರ ಧಾನ್ಯ ವಿತರಣೆ -ಸಚಿವ ಸುರೇಶ್ ಕುಮಾರ್

