ಗ್ರಾಮೀಣ, ನಗರ, ಪಟ್ಟಣ ಕೊಳೆಗೇರಿಗಳಲ್ಲಿನ ಸೋಂಕಿತರಿಗೆ ಹೋಮ್ ಐಸೋಲೇಷನ್ ಇಲ್ಲ -ಡಾ.ಅಶ್ವತ್ಥನಾರಾಯಣ

ಬೆಂಗಳೂರು: ರಾಜ್ಯದ ಗ್ರಾಮೀಣ ಹಾಗೂ ನಗರ ಮತ್ತು ಪಟ್ಟಣ ಪ್ರದೇಶಗಳ ಕೊಳಗೇರಿಗಳಲ್ಲಿ ಕೋವಿಡ್ ಸೋಂಕಿತರನ್ನು ಹೋಮ್ ಐಸೋಲೇಷನ್ ಮಾಡದಿರಲು ನಿರ್ಧರಿಸಿರುವ ಸರಕಾರ, ಅಂಥ ಪ್ರದೇಶಗಳ ಎಲ್ಲ ಸೋಂಕಿತರನ್ನೂ ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಂಗಳೂರಿನಲ್ಲಿ ಶನಿವಾರ ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ನೇತೃತ್ವದಲ್ಲಿ ನಡೆದ ಕಾರ್ಯಪಡೆಯ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ ಅವರು ಈ ಕುರಿತು ಮಾಹಿತಿ ನೀಡಿದರು.
ಹಳ್ಳಿಗಳಲ್ಲಿ ವಾಸ ಮಾಡುವ ಸೋಂಕಿರನ್ನು ಯಾವುದೇ ಕಾರಣಕ್ಕೂ ಅವರ ಮನೆಗಳಲ್ಲೇ ಕ್ವಾರಂಟೈನ್ ಮಾಡುವುದಿಲ್ಲ. ಪಾಸಿಟೀವ್ ಆಗಿದೆ ಎಂದು ವರದಿ ಬಂದ ತಕ್ಷಣವೇ ಹತ್ತಿರದ ಕೋವಿಡ್ ಕೇರ್ ಕೇಂದ್ರಕ್ಕೆ ಶಿಫ್ಟ್ ಮಾಡಿ ಚಿಕಿತ್ಸೆ ಕೊಡಲಾಗುವುದು. ಅದೇ ರೀತಿ ನಗರ- ಪಟ್ಟಣ ಪ್ರದೇಶಗಳ ಕೊಳೆಗೇರಿಗಳಲ್ಲಿ ವಾಸ ಮಾಡುವ ಸೋಂಕಿತರಿಗೂ ಇದೇ ರೀತಿಯಲ್ಲಿ ಸ್ಥಳಾಂತರ ಮಾಡಿ ಸೋಂಕು ಹರಡದಂತೆ ನೋಡಿಕೊಳ್ಳಲು ಹಾಗೂ ಅವರಿಗೆ ಗುಣಮಟ್ಟದ ಚಿಕಿತ್ಸೆ, ಆಹಾರ, ಔಷಧಿ ನೀಡಲು ಸುಲಭವಾಗುತ್ತದೆ ಎಂದರು.
ಗ್ರಾಮೀಣ ಭಾಗ ಹಾಗೂ ನಗರದ ಕೊಳೆಗೇರಿಗಳಿಗೆ ಆರೋಗ್ಯ ಸಿಬ್ಬಂದಿ ತೆರಳಿ ಮನೆ ಮನೆಯಲ್ಲೂ ರಾಟ್ ಟೆಸ್ಟ್ ಮಾಡಬೇಕು. ಪಾಸಿಟಿವ್ ಆದವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿಯೇ ಇರಬೇಕು. ಪ್ರತಿ ಪಿಎಚ್‍ಸಿ ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿನ ಹಾಸ್ಟೆಲ್ ಇತ್ಯಾದಿ ಕಟ್ಟಡಗಳನ್ನು ಬಳಸಿಕೊಂಡು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಈ ಎಲ್ಲ ಜವಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ವಹಿಸಲು ಕಾರ್ಯಪಡೆ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಡಾ.ಅಶ್ವತ್ಥನಾರಾಯಣ ಮಾಹಿತಿ ನೀಡಿದರು.
ವ್ಯಾಕ್ಸಿನ್ ಬಗ್ಗೆ ಉಂಟಾಗಿರುವ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪಡೆ ಕೆಲ ಪರಿಹಾರಗಳನ್ನು ಕಂಡುಕೊಂಡಿದೆ. ಕೋವ್ಯಾಕ್ಸಿನ್ ಮಟ್ಟಿಗೆ ಹೇಳುವುದಾದರೆ ಇನ್ನು 2ನೇ ಡೊಸ್ ಅನ್ನು ಮಾತ್ರ ನೀಡಲಾಗುವುದು. ಮೊದಲ ಡೋಸ್ ಪಡೆದು 6 ವಾರ ಆಗಿರುವವರμÉ್ಟೀ 2ನೇ ಡೋಸ್ ಲಸಿಕೆ ಪಡೆಯಲು ಅರ್ಹರು. ಇನ್ನು ಕೋವಿಶೀಲ್ಡ್ ವಿಚಾರಕ್ಕೆ ಬಂದರೆ, 45+ ವಯೋಮಿತಿಯವರಿಗೆ ಮೊದಲನೇ ಡೋಸ್ ನೀಡಲು ಆದ್ಯತೆ ಕೊಡಲಾಗುತ್ತದೆ. ಮೊದಲ ಡೋಸ್ ಪಡೆದು 12 ವಾರ ಆದವರಿಗೆ ಮಾತ್ರ 2ನೇ ಡೋಸ್ ಪಡೆಯಲು ಅವಕಾಶ ಇರುತ್ತದೆ ಎಂದು ಡಿಸಿಎಂ ತಿಳಿಸಿದರು.
ಯಾರಿಗೆ ಆದ್ಯತೆ ಮೇಲೆ ಲಸಿಕೆ ಕೊಡಬೇಕು ಎಂಬುದನ್ನು ನಿರ್ಧರಿಸಲು ಮೊದಲು ಪಟ್ಟಿ ಸಿದ್ಧ ಮಾಡಲಾಗುವುದು. ಲಸಿಕೆಯ ದಾಸ್ತಾನು ನೋಡಿಕೊಂಡು 18-44 ವಯೋಮಿತಿಯವರಿಗೆ ಯಾವ ದಿನಾಂಕದಿಂದ ಲಸಿಕೆ ಕೊಡಬೇಕು ಎಂಬುದನ್ನು ಕಾರ್ಯಪಡೆ ನಿರ್ಧರಿಸುತ್ತದೆ ಎಂದರು.
ಇದಕ್ಕಾಗಿ ಪ್ರತ್ಯೇಕ ಆಪ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ಆಪ್‍ಅನ್ನು ಕೋವಿನ್ ಪೆÇೀರ್ಟಲ್‍ಗೆ ಅನುಸಂಧಾನವಾದ ಮೇಲೆ ಈ ವಯೋಮಿತಿಯವರಿಗೆ ಲಸಿಕೆ ಕೊಡುವುದನ್ನು ಆರಂಭಿಸಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇನ್ನು ಲಸಿಕೆ ಕೊಡುವುದನ್ನು ಆಸ್ಪತ್ರೆಯ ಬದಲಾಗಿ ವಿಶಾಲವಾದ ಶಾಲಾ ಕಟ್ಟಡ, ಶಾಲಾ ಮೈದಾನ, ಕ್ರೀಡಾಂಗಣ ಇತ್ಯಾದಿ ಕಡೆಗಳಲ್ಲಿ ಲಸಿಕೆ ಕೊಡಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಆಮ್ಲಜನಕ ಬಳಕೆ, ತಯಾರಿಕೆ, ಘಟಕಗಳ ಸ್ಥಾಪನೆ, ಮೂಲಸೌಕರ್ಯ ಸ್ಥಾಪನೆ, ನಿರ್ವಹಣೆ ಇತ್ಯಾದಿ ಅಂಶಗಳ ಬಗ್ಗೆ ಇನ್ನು 3-4 ದಿನಗಳಲ್ಲಿ ನೂತನ ಆಮ್ಲಜನಕ ನೀತಿಯನ್ನು ರೂಪಿಸಲಾಗುವುದು ಎಂದು ಡಿಸಿಎಂ ಪ್ರಕಟಿಸಿದರು.
ಆಮ್ಲಜನಕ ಬಳಕೆಯನ್ನು ನಿಯಂತ್ರಣ ಮಾಡುವ ಉದ್ದೇಶದಿಂದ ಡಿಆರ್ ಡಿಒ ಅಭಿವೃದ್ಧಿಪಡಿಸಿರುವ 1 ಸಾವಿರ ಯಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಲು ಕಾರ್ಯಪಡೆ ತೀರ್ಮಾನಿಸಿದೆ. ಪ್ರತಿ ಒಂದು ಯಂತ್ರಕ್ಕೆ 6ರಿಂದ 10 ಸಾವಿರ ರೂ. ಆಗುತ್ತದೆ ಎಂದ ಅವರು, 6 ಜಿಲ್ಲೆಗಳಲ್ಲಿ ಆಮ್ಲಜನಕ ಬಾಟ್ಲಿಂಗ್ ಯೂನಿಟ್ ಸ್ಥಾಪಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.
ಕೋವಿಡ್‍ನಿಂದ ಗುಣಮುಖರಾದವರಲ್ಲಿ ಅದರಲ್ಲೂ ಮುಖ್ಯವಾಗಿ ಮಧುಮೇಹಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ವಹಿಸಲಾಗಿದೆ. ಪ್ರತಿ ವಾರ 400 ರೋಗಿಗಳಿಗೆ ಈ ರೀತಿ ಬ್ಲಾಕ್ ಫಂಗಸ್ ಬರುವ ನಿರೀಕ್ಷೆ ಇದೆ ಎಂದು ತಾಂತ್ರಿಕ ಸಮಿತಿ ಅಂದಾಜು ಮಾಡಿದೆ. ಹೀಗಾಗಿ ವಾರಕ್ಕೆ ಆಂಪೆÇ್ಕೀಟೆರಿಸಿನ್ ಔಷಧಿಯ 20,000 ವೈಲ್ಸ್ ಪೂರೈಕೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಬೇಡಿಕೆ ಹೆಚ್ಚಾದ ಕಾರಣಕ್ಕೆ ಈ ಔಷಧಿಯ ಕೊರತೆ ಉಂಟಾಗಿದೆ ಎನ್ನುವ ಮಾಹಿತಿಯನ್ನೂ ಡಿಸಿಎಂ ಹಂಚಿಕೊಂಡರು.
ಕೋವಿಡ್ ಕಾರ್ಯಪಡೆ ಸದಸ್ಯರೂ ಆದ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಸುರೇಶ್ ಕುಮಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.