ಬೆಂಗಳೂರು: 18ರಿಂದ 44 ವರ್ಷ ವಯೋಮಿತಿಯೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ಮೇ 22ರಿಂದ ಕೋವಿಡ್ ಲಸಿಕೆ ಕೊಡಲಾಗುವುದು ಹಾಗೂ ಒಂದೆರಡು ತಿಂಗಳಲ್ಲಿ ರಾಜ್ಯದ 500 ಕಡೆ ಆಮ್ಲಜನಕ ಉತ್ಪಾದಕ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದಲ್ಲಿ ಬಿಜೆಪಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರ ಜತೆ ಡಿಸಿಎಂ ಮಾತನಾಡಿದರು.
ರಾಜ್ಯವೇ ಲಸಿಕೆ ನೀಡಲು ಅದರ ಮೇಲೆ ವ್ಯವಸ್ಥಿತ ನಿಗಾ ಇರಿಸಲು ಪ್ರತ್ಯೇಕ ಸಾಫ್ಟ್‍ವೇರ್‍ವೊಂದನ್ನು ಅಭಿವೃದ್ಧಿ ಮಾಡಲಾಗಿದ್ದು, ಅದನ್ನು ಕೋವಿನ್ ಪೆÇೀರ್ಟಲ್ ಜತೆ ಲಿಂಕ್ ಮಾಡಲಾಗುತ್ತಿದೆ. ಜೂ. 1ರಿಂದ ಈ ಪೆÇೀರ್ಟಲ್ ಕೆಲಸ ಮಾಡಲಿದೆ ಎಂದು ಡಿಸಿಎಂ ತಿಳಿಸಿದರು.
ರಾಜ್ಯದಲ್ಲಿ 1,90,000 ಜನರಿಗೆ ಈಗ ಕೊವ್ಯಾಕ್ಸಿನ್ ಸೆಕೆಂಡ್ ಡೋಸ್ ಕೊಡಬೇಕಿದೆ. ಇದರಲ್ಲಿ 1,70,000 ಕೊವ್ಯಾಕ್ಸಿನ್ ಲಸಿಕೆ ಸಿದ್ಧವಿದ್ದು, ಈಗಾಗಲೇ ಕೊಡಲು ಪ್ರಾರಂಭಿಸಲಾಗಿದೆ ಎಂದರು.
ನಾಳೆಯಿಂದ ಮಾಧ್ಯಮ ಸಿಬ್ಬಂದಿ, ಚಿತಾಗಾರ ಸಿಬ್ಬಂದಿ, ವಿಕಲಚೇತನರು, ಆರೋಗ್ಯ ಕಾರ್ಯಕರ್ತರು ಮತ್ತವರ ಕುಟುಂಬ ಸದಸ್ಯರು, ಕೋವಿಡ್ ಕೆಲಸಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು, ಸರಕಾರಿ ಸಾರಿಗೆ ಸಿಬ್ಬಂದಿ, ವಿದ್ಯುತ್ ಮತ್ತು ನೀರು ಪೂರೈಕೆ ಸಿಬ್ಬಂದಿಗೆ ವ್ಕಾಕ್ಸಿನ್ ಕೊಡಲಾಗುವುದು ಎಂದು ಡಿಸಿಎಂ ತಿಳಿಸಿದರು.
ಇನ್ನೂ ಸೋಂಕಿತರಾಗಿ ಗುಣಮುಖರಾದವರಿಗೆ ತಕ್ಷಣವೇ ಲಸಿಕೆ ಕೊಡಬೇಕಿಲ್ಲ. ಮೂರು ತಿಂಗಳ ನಂತರ ಲಸಿಕೆ ಕೊಟ್ಟರೂ ಸಾಕು. ಕೋವಿಶೀಲ್ಡ್ ಪಡೆದವರಿಗೆ 4-6 ವಾರದಲ್ಲಿ ಸೆಕೆಂಡ್ ಡೋಸ್ ಕೊಡಬೇಕಿತ್ತು. ಆ ಅಂತರವನ್ನು 16 ವಾರಗಳ ವರೆಗೆ ವಿಸ್ತರಿಸಲಾಗಿದೆ. ಡಿಸೆಂಬರ್ ಹೊತ್ತಿಗೆ ರಾಜ್ಯದಲ್ಲಿ ಎಲ್ಲರಿಗೂ ಲಸಿಕೆ ಕೊಡಲಾಗುವುದು. ಕೋವಿಡ್ ನಿಯಂತ್ರಣಕ್ಕೆ ಲಸಿಕೆಯೊಂದೇ ಅಂತಿಮ ಪರಿಹಾರ ಎಂದು ಡಿಸಿಎಂ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಇನ್ನು ಒಂದೆರಡು ತಿಂಗಳಲ್ಲಿಯೇ ರಾಜ್ಯದ ಎಲ್ಲೆಡೆ 400ರಿಂದ 500 ಆಕ್ಸಿಜನ್ ಜನರೇಟರ್‍ಗಳನ್ನು ಸ್ಥಾಪಿಸಲಾಗುವುದು. ಪ್ರತಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು. ಅಲ್ಲಿಯೂ ಐಸಿಯುಗಳನ್ನು ಹಾಕುತ್ತಿದ್ದೇವೆ ಎಂದು ಅವರು ಹೇಳಿದರು.
ಒಂದು ಆಕ್ಸಿಜನ್ ಬೆಡ್‍ಗೆ 20,000 ಲೀಟರ್ ಆಮ್ಲಜನಕ ಬೇಕು. ಈ ಲೆಕ್ಕದಲ್ಲಿ ನೋಡಿದರೆ, ರಾಜ್ಯದಲ್ಲಿರುವ ಎಲ್ಲ ಆಕ್ಸಿಜನ್ ಬೆಡ್‍ಗಳಿಗೆ ಆಗಿ ಮಿಕ್ಕುವಷ್ಟು ಆಮ್ಲಜನಕದ ತುರ್ತು ಸಂಗ್ರಹ ನಮ್ಮಲ್ಲಿದೆ. ಮೂರನೇ ಅಲೆಯ ದೃಷ್ಟಿ ಇಟ್ಟುಕೊಂಡು ಇನ್ನು ಹೆಚ್ಚೆಚ್ಚು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಎಂ ಹೇಳಿದರು.
ಬ್ಲ್ಯಾಕ್ ಫಂಗಸ್ ಬೇರೆ ರಾಜ್ಯಗಳಲ್ಲಿ ಮೊದಲು ಕಂಡು ಬಂದಿತ್ತು. ನಮ್ಮಲ್ಲಿ ಈಗ ಕಂಡುಬಂದಿದೆ. ಈಗ ಒಂದು ನಿರ್ದಿಷ್ಟ ಔಷಧಿಗೆ ಬೇಡಿಕೆ ಬಂದಿದೆ. ಆದರೆ, ಇದಕ್ಕೆ ಹಲವಾರು ಔಷಧಿಗಳಿದ್ದರೂ ಜನರು ಮಾತ್ರ ಲೈಸೋಸೋಮಲ್ ಅಮಪೆÇೀಟೆರಿಸನ್ ಔಷಧಿಯನ್ನೇ ಕೇಳುತ್ತಿದ್ದಾರೆ. ಲೈಸೋಸೋಮಲ್ ಅಮಪೆÇೀಟೆರಿಸನ್-ಬಿ ಸೇರಿ ಇನ್ನೂ ಪರ್ಯಾಯ ಔಷಧ ಇದ್ದರೂ ಜನರು ಅದಕ್ಕೇ ಮುಗಿಬೀಳುತ್ತಿದ್ದಾರೆ ಎಂದರು ಡಿಸಿಎಂ.
ಬ್ಲ್ಯಾಕ್ ಫಂಗಸ್ ಅನ್ನು ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳು ರಹಸ್ಯವಾಗಿ ಚಿಕಿತ್ಸೆ ನೀಡುವಂತಿಲ್ಲ, ಯಾರೂ ಪಡೆಯುವಂತೆಯೂ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯಕ್ಕೆ ಔಷಧಿ ಹಂಚಿಕೆಯಲ್ಲಿ ಕೇಂದ್ರ ಸರಕಾರ ತಾರತಮ್ಮ ಎಸಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಡಾ.ಅಶ್ವತ್ಥನಾರಾಯಣ, ಮಹಾರಾಷ್ಟ್ರ, ಗುಜರಾಜ್ ಮುಂತಾದ ರಾಜ್ಯಗಳಲ್ಲಿ ಜನವರಿಯಿಂದಲೇ ಎರಡನೇ ಅಲೆ ಆರಂಭವಾಯಿತು. ರಾಜ್ಯದಲ್ಲಿ ಏಪ್ರಿಲ್‍ನಿಂದ ಶುರುವಾಯಿತು. ಅಲ್ಲೆಲ್ಲ ಸೋಂಕಿತರು ಹೆಚ್ಚಾದ ಕಾರಣ ಮೊದಲು ಆದ್ಯತೆಯ ಮೇರೆಗೆ ಔಷಧಿ, ಆಕ್ಸಿಜನ್, ರೆಮಿಡಿಸಿವಿರ್‍ಗಳನ್ನು ಕೇಂದ್ರವು ಆ ರಾಜ್ಯಗಳಿಗೆ ಪೂರೈಕೆ ಮಾಡಿತು ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಯಲಹಂಕ ಶಾಸಕ ಮತ್ತು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಉಪಸ್ಥಿತರಿದ್ದರು.
ಮೇ 22ರಿಂದ 18-44 ವಯೋಮಿತಿಯ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ -ಡಿಸಿಎಂ

