ಬೆಂಗಳೂರು: ಸುಪ್ರೀಂ ಕೋರ್ಟಿನ ನಿರ್ದೇಶನವನ್ನು ಉಲ್ಲಂಘಿಸಿ ಯಾವುದಾದರೂ ಆಸ್ಪತ್ರೆ ಅಧಿಕ ಶುಲ್ಕ ಪಡೆಯುತ್ತಿದ್ದರೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಗಮನಕ್ಕೆ ತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸೋಮವಾರ ಟ್ವೀಟ್ ಮಾಡಿದ ಅವರು, ಕೋವಿಡ್‍ನಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಸ್ಪತ್ರೆಯ ಬಿಲ್ಲುಗಳೂ ಶಾಕ್ ನೀಡುತ್ತಿವೆ. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಹಲವು ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ.
ಆಸ್ಪತ್ರೆಗಳ ಈ ಕೃತ್ಯ ಕೂಡಲೇ ಕೊನೆಯಾಗಬೇಕು. ನೀವು ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ನನ್ನನ್ನು ಟ್ವಿಟರ್ ಮತ್ತು ಫೇಸ್‍ಬುಕ್‍ನಲ್ಲಿ ಟ್ಯಾಗ್ ಮಾಡಿ. ಕೂಡಲೇ ಆ ಕುರಿತು ಮಾಹಿತಿ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದಿದ್ದಾರೆ.
ಜನರಿಂದ ಅತ್ಯಧಿಕ ಶುಲ್ಕ ಪಡೆದು ಶೋಷಿಸುತ್ತಿರುವ ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆ ಒದಗಿಸುವವರನ್ನು ಕರ್ನಾಟಕ ಸರ್ಕಾರ ಪೆÇೀಷಿಸುತ್ತಿದೆ. ಜನರ ಸಂಕಷ್ಟದ ಜೊತೆಗೆ ವೈದ್ಯಕೀಯ ಶುಲ್ಕವೂ ಏರುತ್ತಿದೆ. ಈ ಕುರಿತು ಜಾಣಕುರುಡು ಪ್ರದರ್ಶಿಸುತ್ತಿರುವ ಬಿಜೆಪಿ ಸರ್ಕಾರ, ಆಸ್ಪತ್ರೆಗಳು ಆಮ್ಲಜನಕ, ಹಾಸಿಗೆ, ಕೋವಿಡ್ ಪರೀಕ್ಷೆ ಹಾಗೂ ಆಂಬುಲೆನ್ಸ್‍ಗಳಿಗೆ ಅಧಿಕ ಶುಲ್ಕ ಪಡೆಯುತ್ತಿರುವಾಗ ರಾಜ್ಯದ ಮುಖ್ಯಮಂತ್ರಿಗಳು ಮೌನವಹಿಸಿರುವುದು ದುರಂತವೇ ಸರಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಆಸ್ಪತ್ರೆಗಳಿಂದ ತೊಂದರೆಗೊಳಗಾದರೆ ಟ್ವಿಟರ್‍ನಲ್ಲಿ @DKShivakumar ಎಂದು ಟ್ಯಾಗ್ ಮಾಡಲು ಡಿಕೆಶಿ ತಿಳಿಸಿದ್ದಾರೆ.
ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ, ವೈದ್ಯಕೀಯ ಸೌಕರ್ಯಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ. ಲಸಿಕೆಯನ್ನು ವಿತರಿಸುವ ನಮ್ಮ ಯೋಜನೆಗೆ ಅನುಮತಿ ನೀಡದ ಸರ್ಕಾರ ಜನರ ಜೀವವನ್ನು ಅಪಾಯದಂಚಿಗೆ ನೂಕುತ್ತಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೊರೋನಾ ಪಿಡುಗು ಬಾಧಿಸುತ್ತಿರುವಾಗ ಅನೇಕ ವೈದ್ಯಕೀಯ ಸಂಸ್ಥೆಗಳು ಲಾಭದ ಉದ್ದೇಶದಿಂದ ಕೆಲಸ ಮಾಡುತ್ತಿವೆ ಎಂದವರು ತಿಳಿಸಿದ್ದಾರೆ.
ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸಿದರೆ ನನ್ನ ಗಮನಕ್ಕೆ ತನ್ನಿ -ಡಿ.ಕೆ. ಶಿವಕುಮಾರ್

