ಬೆಂಗಳೂರು: ಮ್ಯೂಕೊರ್‍ಮೈಕೊಸಿಸ್ (ಕಪ್ಪು ಶಿಲೀಂಧ್ರ) ಚಿಕಿತ್ಸಾ ವಿಧಾನಗಳ ಬಗ್ಗೆ ಸೂಕ್ತ ನೀತಿ ರೂಪಿಸಲಾಗುತ್ತಿದೆ. ತಕ್ಷಣದಿಂದಲೇ ಕೋವಿಡ್ ಚಿಕಿತ್ಸೆ ಪಡೆದ ರೋಗಿಗಳಿಗೆ ಮನೆಯಲ್ಲೇ ಕೌನ್ಸೆಲಿಂಗ್ ಮತ್ತು ನಿಗಾ ವ್ಯವಸ್ಥೆಗೂ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ರೋಗದ ಮೂಲ ಪತ್ತೆ ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಲುವಾಗಿ ವಿಕ್ಟೋರಿಯಾ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥೆ ಡಾ. ಅಂಬಿಕಾ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಸಚ್ಚಿದಾನಂದ ಅವರ ಅಧ್ಯಕ್ಷತೆಯ ಎರಡು ಪ್ರತ್ಯೇಕ ಸಮಿತಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರಿಗೆ ಬುಧವಾರ ಮಾಹಿತಿ ನೀಡಿದರು.
ಎರಡೂ ಸಮಿತಿಗಳ ತಜ್ಞರ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಲಾಗಿದೆ. ಅವರು ನೀಡಿರುವ ಅಭಿಪ್ರಾಯಗಳ ಆಧಾರದ ಮೇಲೆ ಕೋವಿಡ್ ಚಿಕಿತ್ಸೆಗೆ ದಾಖಲಾಗುವ ರೋಗಿಗಳಿಗೆ ಮೊದಲ ವಾರ ಅನಗತ್ಯವಾಗಿ ಸ್ಟಿರಾಯ್ಡ್ ನೀಡದಂತೆ ವೈದ್ಯರಲ್ಲಿ ಮನವಿ ಮಾಡುತ್ತಿದ್ದೇನೆ. ಚಿಕಿತ್ಸೆ ಆರಂಭಿಸಿದ ಎರಡನೇ ವಾರದಲ್ಲಿ ಅಗತ್ಯವಿದ್ದರೆ ಮಾತ್ರ ಸ್ಟಿರಾಯ್ಡ್ ನೀಡಬಹುದಾಗಿದೆ. ಅದು ಕೂಡ ವೈದ್ಯರ ನಿಗಾ ವ್ಯವಸ್ಥೆಯಲ್ಲಿ ಮಾತ್ರ. ಈ ಕುರಿತು ಎಲ್ಲಾ ವೈದ್ಯರಿಗೂ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.
ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಸ್ಟಿರಾಯ್ಡ್ ನೀಡಿದಾಗ ಮ್ಯೂಕೊರ್‍ಮೈಕೊಸಿಸ್ ಕಂಡು ಬಂದಿದೆ ಎಂದು ತಜ್ಞರು ತಿಳಿಸಿರುವುದಾಗಿ ವಿವರಿಸಿದರು.
ಇದಲ್ಲದೆ, ಸಕ್ಕರೆ ಹಾಗೂ ಗುರುತಿಸಿರುವ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಕೋವಿಡ್ ಚಿಕಿತ್ಸೆ ಪಡೆದು ಗುಣಮುಖರಾದ ಬಳಿಕ ಬಿಡುಗಡೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಬಿಡುಗಡೆಗೂ ಮೊದಲು, ಇಎನ್‍ಟಿ ತಜ್ಞರಿಂದ ಪರಿಶೀಲನೆ, ಅಗತ್ಯವಿದ್ದರೆ ಎಂಆರ್‍ಐ ಪರೀಕ್ಷೆ ಬಿಡುಗಡೆಯಾಗಿ ಮನೆಗೆ ಹಿಂತಿರುಗಿದ ಒಂದು ವಾರದ ಬಳಿಕ ಅವರಾಗಿಯೇ ಬಂದು ನಮ್ಮ ಜಿಲ್ಲಾಸ್ಪತ್ರೆಗಳಲ್ಲಿ ಆರಂಭಿಸಲಿರುವ ಕೋವಿಡ್ ನಂತರದ ಚಿಕಿತ್ಸಾ ವಾರ್ಡುಗಳಲ್ಲಿ ಅವರಿಗೆ ಪರೀಕ್ಷೆ ನಡೆಸಬೇಕು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಲಾಗುತ್ತದೆ ಎಂದರು.
ಕೋವಿಡ್ ನಂತರದ ಚಿಕಿತ್ಸಾ ವಾರ್ಡುಗೆ ತಪಾಸಣೆಗೆ ಬರಲು ಸಾಧ್ಯವಾಗದವರಿಗೆ ವಿಡಿಯೋ ಕಾಲ್ ಮೂಲಕ ಕೌನ್ಸೆಲಿಂಗ್ ಮಾಡಲಾಗುವುದು. ಹದಿನೈದು ದಿನಗಳ ಕಾಲ ಅವರನ್ನು ಪರಿಶೀಲನೆಗೆ ಒಳಪಡಿಸಲಾಗುವುದು. ಒಂದು ವೇಳೆ ಯಾರಿಗಾದರೂ ರೋಗ ಲಕ್ಷಣ ಕಂಡು ಬಂದಲ್ಲಿ ಅವರಿಗೆ ವಿಡಿಯೋ ಕಾಲ್ ಮೂಲಕ ಪರಿಶೀಲಿಸಿ ಅಗತ್ಯವಿದ್ದರೆ ಆಸ್ಪತ್ರೆಗೆ ಕರೆತರಲು ವ್ಯವಸ್ಥೆ ಮಾಡಲಾಗುವುದು.
ಕಪ್ಪು ಶಿಲೀಂಧ್ರ ರೋಗ ಪತ್ತೆ, ಚಿಕಿತ್ಸಾವಿಧಾನಕ್ಕೆ ಮಾರ್ಗಸೂಚಿ -ಸಚಿವ ಸುಧಾಕರ್

