ಮೈಸೂರು: ತಂಬಾಕು ಮತ್ತು ಮದ್ಯ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಮೈಸೂರು ರೈಲ್ವೆ ಠಾಣೆಯ ವೃತ್ತ ನಿರೀಕ್ಷಕ ಶ್ರೀನಿವಾಸ್ ರವರು ಹೇಳಿದರು.
ಜೈ ಭೀಮ್ ಜನಸ್ಪಂದನ ವೇದಿಕೆ ವತಿಯಿಂದ ಸೋಮವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ನಗರದ ಚಾಮುಂಡಿಪುರಂ ವೃತ್ತದಲ್ಲಿ ತಂಬಾಕಿಗೆ ನೀರು ಹಾಕುವ ಮೂಲಕ ವಿಶೇಷವಾಗಿ ಸಾರ್ವಜನಿಕರಿಗೆ ವ್ಯಸನದಿಂದ ದೂರವಿರುವಂತೆ ಜಾಗೃತಿ ಮೂಡಿಸಲಾಯಿತು.
ತಂಬಾಕು ಉತ್ಪನ್ನಗಳಿಗೆ ನಿರಾಕರಿಸುವ ಮೂಲಕ ವಿಶ್ವ ತಂಬಾಕು ರಹಿತ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ನೈಋತ್ಯ ರೈಲ್ವೆ ಆರಕ್ಷಕ ವೃತ್ತ ನಿರೀಕ್ಷಕ ಎಲ್. ಶ್ರೀನಿವಾಸ್ ರವರು, ವ್ಯಕ್ತಿ ತಂಬಾಕು ಮತ್ತು ಮದ್ಯ ವ್ಯಸನಿ ಆಗದಿದ್ದರೆ ಆರೋಗ್ಯದಿಂದ ಇರುತ್ತಾನೆ. ವ್ಯಸನಕ್ಕೆ ದಾಸರಾಗಿದ್ದರೆ ಮನುಷ್ಯ ಕೆಲಸ ನಿರ್ವಹಿಸಲು ಆಸಕ್ತನಾಗುತ್ತಾನೆಂದರು.
ಧರ್ಮಗ್ರಂಥ ವ್ಯಸನವನ್ನು ಬೆಂಬಲಿಸುವುದಿಲ್ಲ ಅಲ್ಲದೆ ಅದರಿಂದ ಯಾವುದೇ ಉಪಯೋಗವೂ ಇಲ್ಲ ತಂಬಾಕು ಮತ್ತು ಮದ್ಯದಿಂದ ಜೀವನ ಹಾನಿಯೇ ಹೆಚ್ಚು ಎಂದರು.
ಯುವಕರು ಆಧುನಿಕತೆಯ ಹೆಸರಲ್ಲಿ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ ಎಂದು ತಿಳಿಸಿದರು.
ಧೂಮಪಾನ ಮಾಡುವುದರಿಂದ ವಿಶ್ವದಲ್ಲಿ ಪ್ರತಿ ವರ್ಷ 60 ಲಕ್ಷ ಜನರು ಮರಣ ಹೊಂದುತ್ತಿದ್ದಾರೆಂದು ಅವರು ಅಂಕಿ- ಅಂಶ ನೀಡಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್ ಮಾತನಾಡಿ. ತಂಬಾಕಿನಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗಲಿದ್ದು, ಈ ಬಗ್ಗೆ ಜನಜಾಗೃತಿ ಅಗತ್ಯ ಎಂದ ಅವರು ಕೇಂದ್ರ ಸರ್ಕಾರ ತಂಬಾಕು ಮುಕ್ತ ಭಾರತ ಮಾಡಲು ಮುಂದಾಗಿರುವುದು ಶ್ಲಾಘನೆಯ ಎಂದು ಹೇಳಿದರು
ನಂತರ ಬಿಜೆಪಿ ಹಿಂದುಳಿದ ವರ್ಗದ ಮೈಸೂರು ನಗರ ಅಧ್ಯಕ್ಷ ಜೋಗಿ ಮಂಜು ಮಾತನಾಡಿ, ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಂಬಾಕು ಬಳಕೆಯಿಂದ ಬರುವ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು, ಉದ್ಯಮಿ ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ಚಕ್ರಪಾಣಿ ಹಾಗೂ ಇನ್ನಿತರರು ಹಾಜರಿದ್ದರು.

