ಹುಬ್ಬಳ್ಳಿ: ರೈತರಿಗೆ ಎಕರೆಗೆ 10 ಸಾವಿರ ರು. ಪರಿಹಾರ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸರಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಡಿಕೆಶಿ ಮಾತನಾಡಿದರು.
ಕೃಷಿ ಕ್ಷೇತ್ರವು ಆರ್ಥಿಕವಾಗಿ ತೊಂದರೆಗೊಳಗಾಗಿದ್ದು, ತರಕಾರಿ ಹಾಗೂ ಹೂವು ಬೆಳೆಗಾರರ ಕೊರೊನಾ ಪರಿಹಾರ ಪ್ಯಾಕೇಜ್ ಅನ್ನು ಪ್ರತಿ ಎಕರೆಗೆ ನಾಲ್ಕು ಸಾವಿರ ರೂ.ನಿಂದ ಹತ್ತು ಸಾವಿರಕ್ಕೆ ಏರಿಸಬೇಕು ಎಂದರು.
ಲಾಕ್ ಡೌನ್ ವಿಚಾರವಾಗಿ ಸರ್ಕಾರ ಯಾವ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಲಿ. ಆದರೆ ನಷ್ಟ ಅನುಭವಿಸುವ ಜನರಿಗೆ ಪರಿಹಾರ ನೀಡಲಿ ಎಂದು ಡಿಕೆಶಿ ತಿಳಿಸಿದರು.
ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಳೀಯ ರೈತರ ಜಮೀನಿಗೆ ಸೋಮವಾರ ಭೇಟಿ ನೀಡಿ, ಅವರ ಸಂಕಷ್ಟಗಳನ್ನು ಆಲಿಸಿದ ಶಿವಕುಮಾರ್ ಅವರು, ರೈತರ ಬೆನ್ನಿಗೆ ನಿಲ್ಲುವ ಭರವಸೆ ಕೊಟ್ಟರು.
ಕೋವಿಡ್ ಪಿಡುಗಿನ ಸಮಯದಲ್ಲಿ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. 6 ರಿಂದ 8 ಗಂಟೆ ನಡುವೆ ಅಂದರೆ ಎರಡೇ ತಾಸಿನ ಅವಧಿಯಲ್ಲಿ ಅವರು ತರಕಾರಿ, ಹಣ್ಣು-ಹಂಪಲು ಮತ್ತು ಇತರ ಬೆಳೆಗಳನ್ನು ಮಾರಬೇಕೆಂಬ ಆದೇಶದಿಂದ ಎಲ್ಲ ಬೆಳೆಗಳು ಬಿಕರಿಯಾಗದೆ ಹಾಳಾಗುತ್ತಿವೆ ಎಂದರು.
ಬಿತ್ತನೆಯ ಸಮಯ ಪ್ರಾರಂಭವಾಗಿದ್ದರೂ ರೈತರಿಗೆ ಗೊಬ್ಬರ, ಬೀಜ ಹಾಗೂ ಡಿಎಪಿ ದೊರೆಯುತ್ತಿಲ್ಲ. ಬೆಂಬಲ ಬೆಲೆಯನ್ನೂ ನಿಗದಿಪಡಿಸಿಲ್ಲ ಎಂದು ಹೇಳಿದರು.
ಕಳೆದ ವರ್ಷದ ಪರಿಹಾರವನ್ನೂ ಕೊಟ್ಟಿಲ್ಲ. ಸರ್ಕಾರ ತರಕಾರಿ, ಹೂ, ಹಣ್ಣು ಬೆಳೆಗಾರರಿಗೆ ಹೆಕ್ಟೇರ್ ಗೆ ರೂ. 10 ಸಾವಿರ ಪರಿಹಾರ ಘೋಷಿಸಿದೆ. ಸಣ್ಣ ರೈತರು ಅರ್ಧ ಎಕರೆಯಲ್ಲಿ ಬೆಳೆ ಬೆಳೆಯುತ್ತಾರೆ. ಆತ ತನಗೆ ಬರುವ ಬಿಡಿಗಾಸಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಾ? ಎಂದು ಶಿವಕುಮಾರ್ ಪ್ರಶ್ನಿಸಿದರು.
ಸರ್ಕಾರ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ್ದು, ರೈತರ ಬೆಳೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ಸರ್ಕಾರ ಯಾರ ಪರವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದು ಡಿಕೆಶಿ ಹೇಳಿದರು.
ರೈತರಿಗೆ ಎಕರೆಗೆ 10 ಸಾವಿರ ರು. ಪರಿಹಾರ ಕೊಡಿ -ಡಿ.ಕೆ.ಶಿ

