ಬಡಬ್ರಾಹ್ಮಣರನ್ನು ರಕ್ಷಿಸುವುದು ವಿಪ್ರ ಸಂಘ, ಮುಖಂಡರ ಕರ್ತವ್ಯ -ಡಾ. ಭಾನುಪ್ರಕಾಶ್ ಶರ್ಮಾ

ಮೈಸೂರು: ಬಡಬ್ರಾಹ್ಮಣರನ್ನು ರಕ್ಷಿಸುವುದು ವಿಪ್ರ ಸಂಘ, ಮುಖಂಡರ ಕರ್ತವ್ಯ ಎಂದು ಧಾರ್ಮಿಕ ಚಿಂತಕರಾದ ಡಾ. ಭಾನುಪ್ರಕಾಶ್ ಶರ್ಮಾ ತಿಳಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ ಹಾಗೂ ಖಿಲ್ಲೆ ಮೊಹಲ್ಲಾದಲ್ಲಿರುವ ಶಂಕರಮಠ, ಒಂಟಿ ಕೊಪ್ಪಲ್ ನಲ್ಲಿರುವ ಓಂಕಾರೇಶ್ವರ ದೇವಾಲಯ ಸೇರಿದಂತೆ ಮೈಸೂರಿನ ಖಾಸಗೀ ದೇವಸ್ಥಾನದ ಅರ್ಚಕರು ಹಾಗೂ ಪುರೋಹಿತರಿಗೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಅರ್ಚಕ ಹಾಗೂ ಪುರೋಹಿತ ಕುಟುಂಬದವರೆಗೆ ಶನಿವಾರ ಆಹಾರ ಕಿಟ್ ಮತ್ತು ಗುರುದಕ್ಷಿಣೆ ನೀಡಿ, ನಂತರ ಅವರು ಮಾತನಾಡಿದರು.
ಗ್ರಾಮ ಮಟ್ಟದಲ್ಲಿ ವಿಪ್ರರ ಮನೆಗಳಿಗೆ ದಿನನಿತ್ಯ ಅಡುಗೆ ದಿನಸಿ ಪದಾರ್ಥಗಳಾದ ಆಹಾರ ಕಿಟ್ ಮತ್ತು ಹಿರಿಯ ನಾಗರೀಕರಿಗಾಗಿ ಔಷಧಿಯ ನೆರವಿನ ಮೆಡಿಕಲ್ ಕಿಟ್ ನೀಡಲು ಮುಂದಾಗೋಣ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ 7ಲಕ್ಷಕ್ಕೂ ಹೆಚ್ಚು ಬಡಬ್ರಾಹ್ಮಣರ ಕುಟುಂಬಗಳ ಆರ್ಥಿಕ ಪರಿಸ್ಥಿತಿ ನಿರ್ವಹಣೆ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿದೆ ಇಂದಿನ ಕೊರೊನಾ ಸೋಂಕು ನಿಲ್ಲಲಿ ಎಂದು ಪುರೋಹಿತರು ಅರ್ಚಕರು ರಾಜ್ಯದ ಎಲ್ಲಾ ಮಠಗಳಲ್ಲಿ, ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದವರು ವಿವಿಧ ಬ್ರಾಹ್ಮಣ ಸಂಘ ಸಂಸ್ಥೆಗಳಿಗೆ ಸಹಾಯ ನೀಡುತ್ತಾ ಬಂದಿದ್ದು ಈಗ ಸಂಘದವರು ಸಹ ಬಡ ಬ್ರಾಹ್ಮಣರನ್ನು ಗುರುತಿಸಿ ಅವರವರ ಮನೆಗೆ ತೆರಳಿ ಆಹಾರ ಕಿಟ್ ನೀಡಲು ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ನಿರ್ದೇಶಕ ಎಂ.ಆರ್. ಬಾಲಕೃಷ್ಣ, ಕಾಮಾಕ್ಷಿ ಆಸ್ಪತ್ರೆಯ ಅಧ್ಯಕ್ಷ ಮಹೇಶ್ ಶೆಣೈ, ಅಮೃತೇಶ್ವರ ದೇವಸ್ಥಾನದ ಮುಖ್ಯ ಅರ್ಚಕರಾದ ಮೈ ಕುಮಾರ್, ಶಂಕರಮಠದ ವ್ಯವಸ್ಥಾಪಕರಾದ ಯೋಗಾನಂದ್, ಕಡಕೊಳ ಜಗದೀಶ್, ವಿಕ್ರಂ ಅಯ್ಯಂಗಾರ್, ಜಯಸಿಂಹ ಶ್ರೀಧರ್, ಸುಚೀಂದ್ರ, ಚಕ್ರಪಾಣಿ, ಜ್ಯೋತಿ ಮತ್ತಿತರರಿದ್ದರು.