ರಾಜ್ಯಾದ್ಯಂತ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಿಸಲು ಸಿಎಂರಲ್ಲಿ ಸಚಿವ ನಿರಾಣಿ ಮನವಿ

ಬೆಂಗಳೂರು: ಕರ್ನಾಟಕದ ಇತಿಹಾಸದಲ್ಲಿ ಅಭಿವೃದ್ಧಿಗೆ ಹೊಸ ವ್ಯಾಖ್ಯಾನ ಬರೆದ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನಲ್ಲಿ ಕೆಲವು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ನಿರಾಣಿ ಅವರು, ಮುಂದಿನ ಯುವಜನಾಂಗಕ್ಕೆ ಇದು ಅತ್ಯಂತ ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಪಠ್ಯ ಪುಸ್ತಕದಲ್ಲಿ ಅವರ ಚರಿತ್ರೆಯನ್ನು ಆಳವಡಿಸಲು ಕ್ರಮಕೈಗೊಳ್ಳಬೇಕು. ಸರ್ ಎಂ ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯನ್ನು ಎಂಜಿನಿಯರ್ ದಿನಾಚರಣೆ ಮಾಡಿದಂತೆ ಇನ್ನು ಮುಂದೆ ಜೂ. 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮ ದಿನವನ್ನು ಸರಕಾರದ ವತಿಯಿಂದ ಆಚರಿಸಬೇಕು. ಅನೇಕ ಕೈಗಾರಿಕೆಗಳ ಸ್ಥಾಪನೆಗೆ ಕಾರಣೀಭೂತರಾದ ಅವರ ದಿನಾಚರಣೆಯನ್ನು ಕೈಗಾರಿಕಾ ದಿನಾಚರಣೆ ಎಂತಲೂ ಆಚರಸಲು ಸೂಕ್ತವಾದ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಸ್ಥಾಪನೆ, ಪಠ್ಯಪುಸ್ತಕಗಳಲ್ಲಿ ಜೀವನ ಚರಿತ್ರೆ ಅಳವಡಿಕೆ, ಕೈಗಾರಿಕಾ ಹಾಗೂ ಪ್ರತಿ ವರ್ಷ ಜೂನ್ 4 ರಂದು ಜನ್ಮ ದಿನಾಚರಣೆಯನ್ನು ಸರಕಾರದ ವತಿಯಿಂದಲೇ ಆಚರಣೆ ಮಾಡುವಂತೆ ಕೋರಿದ್ದಾರೆ.
ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ನಿರ್ಮಿಸಿರುವುದರಿಂದ ದೇಶ-ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅವರ ವ್ಯಕಿತ್ವವನ್ನು ಪರಿಚಯಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.