ಇಂದು ವಿಶ್ವ ಪರಿಸರ ದಿನಾಚರಣೆ
ಡಾ. ಗುರು ಪ್ರಸಾದ್ ರಾವ್ ಹವಾಲ್ದಾರ್
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಪರಿಸರ ಸಂರಕ್ಷಣೆಗೆ ಪಣ ತೊಡುವ ಉದ್ದೇಶದಿಂದ 1973 ಜೂನ್ 5ರಿಂದ 16 ರವರೆಗೆ ಸ್ವೀಡನ್ ನ ಸ್ಟಾಕ್ ಹೋಂ ನಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಪರಿಸರದ ಸಭೆಯ ಪರಿಣಾಮವಾಗಿ ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮ (ಯುನೆಪ್-ಯು.ಎನ್.ಈ.ಪಿ.) – ಸಹ ಅಂಗಸಂಸ್ಥೆಯನ್ನು ಹುಟ್ಟು ಹಾಕಿ, ವಿಶ್ವದಾದ್ಯಂತದ ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲು ನಿರ್ಧಾರ ಮಾಡಲಾಯಿತು.
ಮುಂದೆ ವಿಶ್ವ ಸಂಸ್ಥೆಯ ಅಂಗಸಂಸ್ಥೆಯಾದ ಯುನೆಪ್-ಯು.ಎನ್.ಈ.ಪಿ. ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನಾಚರಣೆಯನ್ನಾಗಿ ವಿಶ್ವದಾದ್ಯಂತದ ಪರಿಸರ ಆಚರಣೆಯನ್ನು ಜಾರಿಗೆ ತಂದಿತು.
ಈ ದಿನದ ವಿಶೇಷವೇನೆಂದರೆ ಎಲ್ಲರಿಗೂ ಪರಿಸರ ಸಂಬಂಧಿತ ವಿಷಯಗಳು ಪ್ರತಿಯೊಬ್ಬರಿಗೂ ತಿಳಿಯಬೇಕೆಂಬುದೇ ಆಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಸರದ ಸ್ಥಿತಿ ಗತಿ ತಿಳಿಯುವುದು, ಸ್ವಚ್ಛ ಪರಿಸರದ ಅಗತ್ಯತೆಯನ್ನು ಅರಿಯುವುದು ಹಾಗೂ ಜನರಲ್ಲಿ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜಾಗತಿಕ ಮಟ್ಟದಲ್ಲಿ ಮೂಡಿಸುವಂತಹದ್ದುಆಗಿದೆ.
ಈ ದಿನಾಚರಣೆ ವೃಕ್ಷಗಳನ್ನು ನೆಡುವ ಮೂಲಕ, ಜಲ ಮತ್ತು ವಾಯು ಮಾಲಿನ್ಯ ತಡೆವ ಕಾರ್ಯಕ್ರಮಗಳಿಂದ, ಇನ್ನು ಹಲವು ಪರಿಸರ ಆಂದೋಲನ ಗಳಿಂದ ಆಚರಿಸುತ್ತಾ, ಆ ವರುಷದ ಆಚರಣೆಯ ಮುಖ್ಯ ವಿಷಯದ ಸುತ್ತಾ ಜನರಲ್ಲಿ ಜಾಗೃತಿಯುಂಟು ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಪ್ರತಿವರ್ಷ ಒಂದೊಂದೂ ದೇಶದಲ್ಲಿ, ಒಂದು ಪರಿಸರದ ವಿಷಯವನ್ನು ಮೂಲವಾಗಿಸಿ ಆಚರಣೆಯನ್ನು ಹಮ್ಮಿಕೊಳ್ಳುತ್ತದೆ ಮತ್ತು ಈ ವಿಷಯವನ್ನು ಪ್ರಪಂಚದಾದ್ಯಂತದ ಪ್ರಚಾರಪಡಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಜಾಗತಿಕ ಮಟ್ಟದಲ್ಲಿ ಸುಮಾರು ನೂರಕ್ಕಿಂತ ಹೆಚ್ಚಿನ ರಾಷ್ಟ್ರಗಳು ಜೂನ್ ಐದನ್ನು ಪರಿಸರ ದಿನವನ್ನಾಗಿ ಆಚರಿಸಲಾಗುತ್ತಿದೆ.
ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ವಿಶ್ವಸಂಸ್ಥೆಯು ಪರಿಸರ ವ್ಯವಸ್ಥೆ ಯ ಪುನರ್ ಸ್ಥಾಪನೆ ಎಂಬ ವಿಷಯ ಇಟ್ಟುಕೊಂಡಿದೆ. ಈ ಬಾರಿಯ ಜಾಗತಿಕ ಆತಿಥ್ಯವನ್ನು ಪಾಕಿಸ್ತಾನವು ವಹಿಸಿಕೊಂಡಿದೆ.
ಪ್ರಸ್ತುತ ಜಗತ್ತಿನಲ್ಲಿ ಆಧುನಿಕತೆ, ನಗರೀಕರಣ, ಕೈಗಾರೀಕರಣ, ವಿಜ್ಞಾನ, ತಂತ್ರಜ್ಞಾನದ ಅಭಿವೃದ್ಧಿ ಎಂಬ ಹತ್ತು ಹಲವು ಕಾರಣಗಳಿಂದ ಇಂದು ಪರಿಸರಕ್ಕೆ ತೀವ್ರ ಧಕ್ಕೆಯುಂಟಾಗಿದ್ದು, ಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಕರ್ತವ್ಯ ಪ್ರತಿಯೊಬ್ಬರದೂ ಆಗಿದ್ದು, ಈ ಕರ್ತವ್ಯವನ್ನು ನಮಗೆಲ್ಲರಿಗೂ ನೆನಪಿಸುವ ಮಹತ್ವದ ಉದ್ದೇಶ ಕೂಡಾ ಈ ಪರಿಸರ ದಿನಾಚರಣೆಯಲ್ಲಿ ಅಡಗಿದೆ.
ಪರಿಸರವೆಂದರೆ ಭೂಮಿ, ನೀರು, ಹವಾಮಾನಗಳನ್ನು ಒಳಗೊಂಡ ಭೌತಿಕ ಅಥವಾ ಬಾಹ್ಯ ಪರಿಸರವμÉ್ಟೀ ಅಲ್ಲ; ದೇಹದೊಳಗಿನ ಆಂತರಿಕ ಪರಿಸರವನ್ನು- ಮಾನವನನ್ನು ಒಳಗೊಂಡಿರುವ ಸಾಮಾಜಿಕ ಪರಿಸರ ಸಹಿತ ಸೇರಿಸಿ ಕೊಳ್ಳಬಹುದು.
ಜೈವಿಕವಾಗಿ ಸಸ್ಯ, ಪ್ರಾಣಿಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಬಾಹ್ಯ ಕಾರಣಗಳ ಒಟ್ಟು ರೂಪ ಪರಿಸರ. ಜೀವಿಗಳೊಂದಿಗೆ ಪರಿಸರ, ಚೈತನ್ಯ, ವಸ್ತುಗಳ ವಿನಿಮಯ ನಡೆಯುತ್ತಲೇ ಇರುತ್ತದೆ. ಈ ದೃಷ್ಟಿಯಿಂದ, ಒಂದು ಪ್ರದೇಶದ ಜೀವನ ಸಮುದಾಯ, ನೀರು, ನೆಲ, ಉಷ್ಣತೆ, ಆದ್ರ್ಸತೆ, ಬೆಳಕು, ಸಮುದ್ರ ಮಟ್ಟ, ಆಹಾರ ಇತ್ಯಾದಿ ಎಲ್ಲವೂ ಪರಿಸರದ ವ್ಯಾಪ್ತಿಗೆ ಬರುತ್ತದೆ. ಪರಿಸರಕ್ಕೆ ಅನುಗುಣವಾಗಿ ಜೀವಿಗಳ ವರ್ತನೆ, ಹೊಂದಾಣಿಕೆಗಳಲ್ಲಿ ವೈವಿಧ್ಯವಿದೆ. ಪರಿಸರಕ್ಕೆ ತಕ್ಕಂತೆ ಜೀವಿಗಳ ದೇಹ ರಚನೆ, ಸಂತಾನೋತ್ಪತ್ತಿ, ಬೆಳವಣಿಗೆ, ಆತ್ಮರಕ್ಷಣೆ, ವರ್ತನೆಗಳಲ್ಲಿ ಹೊಂದಾಣಿಕೆಗಳು ನಡೆಯುತ್ತವೆ. ಆದ್ದರಿಂದ, ಈ ಭೂಮಿ ಒಂದೇ ಮತ್ತು ಪರಿಸರವು ಒಂದೇ. ಈ ಪರಿಸರವನ್ನು ರಕ್ಷಿಸುತ್ತಾ ಈ ಭೂಮಿಯನ್ನು ರಕ್ಷಿಸುವುದು ಪವಿತ್ರವಾದ ಕರ್ತವ್ಯ.
ಪರಿಸರದ ಶಿಶುಗಳೆನಿಸಿದ ನಮ್ಮ ಮೇಲೆ ಪರಿಸರ ಸಂರಕ್ಷಣೆಯ ಜವಾಬ್ದಾರಿ ತುಸು ಹೆಚ್ಚಾಗಿಯೇ ಇದೆ. ಇಂದಿನ ಪರಿಸರ ಮಾಲಿನ್ಯದ ಗೂಡಾಗಿದ್ದು, ನಮ್ಮ ಇರುವಿಕೆಗೆ ಅರ್ಥ ನೀಡಿದ ಪರಿಸರ ಮಾತೆಯನ್ನು ನಾವು, ನಮ್ಮ ಕಾರ್ಯಗಳಿಂದ ಕಲುಷಿತಗೊಳಿಸಿ, ಅದರ ದುಷ್ಪರಿಣಾಮಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ವಾಯು ಮಾಲಿನ್ಯ, ಜಲ ಮಾಲಿನ್ಯ, ಅಧಿಕ ಉμÁ್ಣಂಶ, ಮಣ್ಣಿನ ಮಾಲಿನ್ಯ, ಅರಣ್ಯ ನಾಶ ಹೀಗೆ ಒಂದೇ, ಎರಡೇ ಪರಿಸರದಲ್ಲಿ ಇಂದು ಉಂಟಾಗಿರುವ ಏರುಪೇರುಗಳು.
ಈ ಏರುಪೇರುಗಳಿಗೆ ಕಾರಣ, ಅಭಿವೃದ್ಧಿ ಹೆಸರಿನಲ್ಲಿ ನಾವು ಪರಿಸರದ ಮೇಲೆ ಮಾಡಿರುವ ದೌರ್ಜನ್ಯದ ಫಲವಾಗಿದ್ದು, ಅದರ ಪರಿಣಾಮವಾಗಿ ಹೃದಯ ಸಂಬಂಧಿ, ಉಸಿರಾಟ ಸಂಬಂಧಿ, ಅಪೌಷ್ಟಿಕತೆಯಂತಹ ಅನೇಕ ದುಷ್ಪರಿಣಾಮ ನಾವು ಎದುರಿಸುತ್ತಿದ್ದೇವೆ.
ಈ ಎಲ್ಲದಕ್ಕೂ ಕಾರಣ ಪರಿಸರದ ಬಗ್ಗೆ ಪ್ರಾಮುಖ್ಯತೆ ನೀಡದೆ ಇರುವುದು, ಅರಿವು ಇಲ್ಲದಿರುವುದೇ ಆಗಿದೆ. ಆದ್ದರಿಂದಲೇ ನಮ್ಮೆಲ್ಲರಲ್ಲೂ ಜಾಗೃತಿ ಮೂಡಿಸಲು, ಪರಿಸರದ ಪರ ನಮ್ಮ ಕರ್ತವ್ಮ ಉತ್ತಮ ಭವಿಷ್ಯಕ್ಕಾಗಿ, ನಮ್ಮ ಮುಂದಿನ ಪೀಳಿಗೆಯ ಉಜ್ಜವವಾದ ನಾಳೆಗಳಿಗಾಗಿ ನಾವು ಇಂದು ಇಂದಿನ ಮಕ್ಕಳಿಗೆ, ಯುವ ಜನರಿಗೆ ಪರಿಸರದ ಕಾಳಜಿ ಮೂಡಿಸಬೇಕಾಗಿದೆ.
ಕೋವಿಡ್ ನಿಂದ ಕಲಿತ ಪಾಠ: ಮನುಕುಲವನ್ನು ಕೋವಿಡ್-19 ಇನ್ನಿಲ್ಲದಂತೆ ಕಾಡುತ್ತಿದ್ದರೂ ಈ ಸೋಂಕು ನಮಗೆ ಹಲವಾರು ಪಾಠಗಳನ್ನು ಕಲಿಸಿದೆ.
ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸ ಹೊರಟ ನಮಗೆ ಈ ಭೂಮಿಯಲ್ಲಿ ನಾವೇನು ಎಂಬುದನ್ನು ತೋರಿಸಿ ಕೊಟ್ಟಿದೆ. ಈ ಬಾರಿಯ ವಿಶ್ವ ಪರಿಸರ ದಿನಕ್ಕೆ ಹೆಚ್ಚೇನೂ ಪ್ರಚಾರದ ಅಗತ್ಯವಿಲ್ಲ. ವರ್ಷಗಳ ಹಿಂದೆ ಈ ನೆಲದ ಮೇಲೆ ನಾವು ಹೇಗೆ ಬದುಕುತ್ತಿದ್ದೆವು, ಈಗ ನಮ್ಮ ಜೀವನಶೈಲಿ ಹೇಗಿದೆ ಎಂಬ ಬಗ್ಗೆ ಕೆಲವು ನಿಮಿಷಗಳ ಕಾಲ ಯೋಚಿಸಿದರೆ ಪರಿಸರ ಸಂರಕ್ಷಣೆಯ ಅನಿವಾರ್ಯತೆ ಏನು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತದೆ. ಮುಂದಿನ ದಿನಗಳಲ್ಲಿ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ನಾವು ಗೆಲ್ಲಬಹುದು.
ಆದರೆ ಕಾಲಚಕ್ರ ಮಾತ್ರ ಉರುಳುತ್ತಿರುತ್ತದೆ. ವೈರಸ್‍ಗಳು ಹೊಸರೂಪದಲ್ಲಿ ಮನುಕುಲವನ್ನು ಕಾಡಬಹುದು. ಈ ಕಾರಣಕ್ಕಾಗಿ ನಮ್ಮ ಮುಂದಿನ ಜನಾಂಗಕ್ಕಾದರೂ ಪರಿಸರವನ್ನು ರಕ್ಷಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಕೈಲಾದಷ್ಟು ಪ್ರಯತ್ನವನ್ನು ನಾವು ನಡೆಸಬೇಕಿದೆ.
ಮರಗಿಡಗಳು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಸ್ವಚ್ಛತೆಯ ನೆಪದಲ್ಲಿ ಮನೆಯ ಸುತ್ತಮುತ್ತಲಿನ ಮರಗಿಡಗಳನ್ನು ಕಡಿದು ಮೈದಾನವಾಗಿಸುವುದು ಬೇಡ. ಮನೆಯ ಅಂಗಳದಲ್ಲಿರುವ ಮರವನ್ನು ಉಳಿಸಿಕೊಂಡು ಹೂದೋಟ ಅಥವಾ ಕೈತೋಟ ನಿರ್ಮಿಸಿದಲ್ಲಿ ಸಹಜತೆ ಇನ್ನಷ್ಟು ಹೆಚ್ಚುತ್ತದೆ.
ಮನೆಯಿಂದ ಹೊರಗೆ ಕಾಲಿಟ್ಟ ತತ್‍ಕ್ಷಣ ವಾಹನಗಳನ್ನು ಅವಲಂಬಿಸುವ ಬದಲು ಕಾಲ್ನಡಿಗೆ ಅಥವಾ ಸೈಕಲ್ ತುಳಿಯುವುದು ನಮ್ಮ ಆರೋಗ್ಯ ಮಾತ್ರವಲ್ಲದೆ ಪರಿಸರದ ಹಿತದೃಷ್ಟಿಯಿಂದಲೂ ಒಳ್ಳೆಯದು.
ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ವಾಪಸ್ ಕರೆತರಲು ಪ್ರತಿನಿತ್ಯ ಸ್ವಂತ ವಾಹನವನ್ನು ಬಳಸುವ ಬದಲು ಸಾಧ್ಯವಾದಷ್ಟು ನಡಿಗೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅಥವಾ ವಿದ್ಯುತ್ ಚಾಲಿತ ಪರಿಸರಸ್ನೇಹಿ ವಾಹನಗಳ ಮೊರೆ ಹೋಗೋಣ.
ನಮ್ಮ ಮನೆಗಳಲ್ಲಿ ಸಾಧ್ಯವಾದಷ್ಟು ಸೌರ ಅಥವಾ ಪವನ ಶಕ್ತಿ ಆಧಾರಿತ ವಿದ್ಯುತ್‍ಬಳಸಲು ಆದ್ಯತೆ ನೀಡೋಣ. ಅಸಾಧ್ಯವಾದಲ್ಲಿ ಸುತ್ತಮುತ್ತಲಿನ ನಿವಾಸಿಗಳು ಅಥವಾ ಆ ಪ್ರದೇಶದ ಸ್ಥಳೀಯರ ಜತೆಗೂಡಿ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರ ರಕ್ಷಣೆಗೆ ಪ್ರಯತ್ನಿಸೋಣ.
ಸಾಧ್ಯವಾದಷ್ಟು ಮರುಬಳಕೆಯ ವಸ್ತುಗಳ ಖರೀದಿ ನಮ್ಮದಾಗಲಿ. ಗಾಜಿನ ಬಾಟಲ್‍ಗಳು, ಮರು ಬಳಕೆಯ ಬ್ಯಾಗ್, ಕಪ್‍ಗಳ ಬಳಕೆ ನಮ್ಮ ಹವ್ಯಾಸವಾಗಲಿ. ಪ್ಲಾಸ್ಟಿಕ್ ವಸ್ತುಗಳಿಗೆ ಶಾಶ್ವತ ವಿದಾಯ ಹೇಳ್ಳೋಣ.
ಮನೆಯಲ್ಲಿನ ಜೈವಿಕ ತ್ಯಾಜ್ಯಗಳನ್ನು ಗೊಬ್ಬರವಾಗಿ ಸಂಸ್ಕರಿಸಿ ನಮ್ಮ ಹೂದೋಟ ಅಥವಾ ಕೈತೋಟಗಳಿಗೆ ಬಳಕೆ ಮಾಡೋಣ.
ಸಾವಯವ ತರಕಾರಿ, ಬೇಳೆಕಾಳು, ಧಾನ್ಯಗಳ ಖರೀದಿಗೆ ಹೆಚ್ಚಿನ ಆದ್ಯತೆ ನೀಡೋಣ. ಇದರಿಂದ ನಮ್ಮ ಆರೋಗ್ಯದ ರಕ್ಷಣೆ ಸಾಧ್ಯ ಮಾತ್ರವಲ್ಲದೆ ಸ್ಥಳೀಯ ಕೃಷಿಕರಿಗೆ ನಾವು ಒಂದಿಷ್ಟು ಸಹಾಯ ಮಾಡಿದಂತಾಗುತ್ತದೆ. ಅಲ್ಲದೆ ಕನಿಷ್ಠ ಸ್ಥಳೀಯ ಮಟ್ಟದಲ್ಲಾದರೂ ಸ್ವಾವಲಂಬಿ ಬದುಕು ನಮ್ಮದಾಗಲಿ.
ಪರಿಸರ ವಿಷಯವನ್ನು ಪಠ್ಯಕ್ರಮದಲ್ಲಿ ಅಳವಡಿಸುವ ಮೂಲಕ ಮುಂದಿನ ತಲೆಮಾರಿನಲ್ಲಿ ಎಳವೆಯಿಂದಲೇ ಪರಿಸರದ ಬಗೆಗೆ ಕಾಳಜಿ ಮೂಡಿಸುವಂತೆ ಸರಕಾರ, ಶಾಲೆಗಳು ಹಾಗೂ ಆಡಳಿತ ವ್ಯವಸ್ಥೆಯನ್ನು ಆಗ್ರಹಿಸೋಣ.
ಕಡಿಮೆ ಬಳಕೆ, ಮರು ಬಳಕೆ, ಪುನರುತ್ಪಾದನೆ, ಪರಿಸರ ಸಂರಕ್ಷಣೆ ಕೇವಲ ಬಾಯಿಮಾತಿಗೆ ಸೀಮಿತವಾಗಿದ್ದರೆ ಶೋಭೆ ತಾರದು. ನಮ್ಮ ದೈನಂದಿನ ಚಟುವಟಿಕೆಗಳ ಭಾಗವಾಗಿರಲಿ.
ಪ್ರತಿ ಪ್ರಾಣಿಗೂ ಮನುಷ್ಯನ ಹಾಗೆಯೇ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂಬುದನ್ನು ಮರೆಯದಿರೋಣ. ಪ್ರಾಣಿಗಳ ವಾಸಸ್ಥಾನಗಳನ್ನು ನಾವು ಅತಿಕ್ರಮಿಸದಿದ್ದಲ್ಲಿ ಅವು ನಮ್ಮ ತಂಟೆಗೆ ಎಂದೂ ಬರಲಾರವು ಎಂಬುದನ್ನು ಅರಿಯೋಣ
ಈ ಪರಿಸರ ನಮ್ಮ ಜನಾಂಗಕμÉ್ಟೀ ಸೀಮಿತವಲ್ಲ, ಮುಂದಿನ ಜನಾಂಗಕ್ಕೂ ಇದನ್ನು ಉಳಿಸುವ ಮಹತ್ತರ ಗುರಿ ಹಾಗೂ ಹೊಣೆಗಾರಿಕೆ ನಮ್ಮದೇ.
ಪರಿಸರ ಹಾನಿ ಎಂದಾಕ್ಷಣ ನೆನಪಿಗೆ ಬರುವುದು ಪ್ಲಾಸ್ಟಿಕ್. ಹಲವು ದಶಕಗಳಿಂದ ಈ ಬಗ್ಗೆ ತಜ್ಞರು, ಸರಕಾರ ಆದಿಯಾಗಿ ಎಲ್ಲರೂ ಮಾತನಾಡುತ್ತಲೇ ಬಂದಿದ್ದರೂ ಪ್ಲಾಸ್ಟಿಕ್‍ಗೆ ಸಮರ್ಪಕವಾದ ಪರ್ಯಾಯವಿನ್ನೂ ಸಿಕ್ಕಿಲ್ಲ. ಇಷ್ಟು ಮಾತ್ರವಲ್ಲದೆ ಪ್ಲಾಸ್ಟಿಕ್ ತ್ಯಾಜ್ಯಗಳ ಸಮರ್ಪಕ ವಿಲೇವಾರಿಯೂ ಇನ್ನೂ ಬಾಯಿಮಾತಿನಲ್ಲೇ ಉಳಿದಿದೆ. ಇದು ಇಡೀ ವಿಶ್ವ ಎದುರಿಸುತ್ತಿರುವ ಸಮಸ್ಯೆಯಾಗಿದ್ದು, ಇಡೀ ವಿಶ್ವವೇ ಒಟ್ಟಾಗಿ ಯೋಚಿಸಬೇಕಿದೆ.

