ಐಎಎಸ್ ಅಧಿಕಾರಿಗಳ ಜಟಾಪಟಿಗೆ ತೆರೆ: ರೋಹಿಣಿ ಸಿಂಧುರಿ ಮತ್ತು ಶಿಲ್ಪಾನಾಗ್ ವರ್ಗ

ಮೈಸೂರು: ಮೈಸೂರಲ್ಲಿ ನಡೆದಿದಿರುವ ಭೂಹಗರಣ, ಪಾಸಿಟಿವಿಟಿಯ ಗೊಂದಲ, ಕೋವಿಡ್ ಸಾವುಗಳ ಲೆಕ್ಕ ಹಾಗೂ ಹದಿನಾರು ಕೋವಿಡ್ ಕೇರ್ ಸೆಂಟರ್‍ಗಳ ಸ್ಥಾಪನೆ ಬಗ್ಗೆ ಉಂಟಾಗಿದ್ದ ಅನುಮಾನಗಳ ನಡುವೆ ಜಟಾಪಟಿ ನೆಪವೊಡ್ಡಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ರಾಜಕೀಯ ಹಿತಾಸಕ್ತಿಗಳನ್ನು ತೃಪ್ತಿಪಡಿಸಿದೆ.
ಹಾಗೆಯೇ ರೋಹಿಣಿ ಅವರ ವರ್ಗಾವಣೆ ವಿವಾದ ಆಗಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಅವರ ವಿರುದ್ಧ ಸಾರ್ವಜನಿಕವಾಗಿ ವಾಕ್ಸ್‍ಮರ ಸಾರಿದ್ದ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರನ್ನೂ ವರ್ಗಾವಣೆ ಮಾಡಲಾಗಿದೆ.
ದೇಶದ ಗಮನ ಸೆಳೆದಿದ್ದಕ್ಸಿಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ ಮತ್ತೂ ಅದರ ಹಿಂದಿನ ಸಂಗತಿಗಳನ್ನು ಹೊರಗೆಳೆಯುವ ಪ್ರಯತ್ನ ಮಾಡದ ಸರಕಾರ, ಕೇವಲ ಇಬ್ಬರಿಗೂ ವರ್ಗಾವಣೆ ಶಿಕ್ಷೆ ವಿಧಿಸಿ ಜಾಣ ಕುರುಡು ನಡೆ ಅನುಸರಿಸಿದೆ.
ರೋಹಿಣಿ ಸಿಂಧೂರಿ ಅವರನ್ನು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ವಾಣಿಜ್ಯ ತೆರಿಗೆ ಇಲಾಖೆಯ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದ ಗೌತಮ್ ಬಗಾದಿ ಅವರನ್ನು ನೇಮಿಸಲಾಗಿದೆ.
ಹಾಗೆಯೇ ಶಿಲ್ಪಾನಾಗ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಇ-ಗವರ್ನೆನ್ಸ್ ವಿಭಾಗದ ನಿರ್ದೇಶಕಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನಾಗಿ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಲಕ್ಷ್ಮೀಕಾಂತ್ ರೆಡ್ಡಿ ಅವರನ್ನು ವರ್ಗ ಮಾಡಲಾಗಿದೆ.
ಸಿಎಂ ಭೇಟಿ ಮಾಡಿದ ರೋಹಿಣಿ ಸಿಂಧೂರಿ
ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭಾನುವಾರ ಬೆಳಗ್ಗೆ ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಸಿಎಂ ನಿವಾಸ ಕಾವೇರಿಗೆ ಬೆಳಿಗ್ಗೆಯೇ ಭೇಟಿ ನೀಡಿದ ರೋಹಿಣಿ ಸಿಂಧೂರಿ ವರ್ಗಾವಣೆ ತಡೆಹಿಡಿಯುವಂತೆ ಮುಖ್ಯಮಂತ್ರಿಗೆ ಕೋರಿದ್ದಾರೆ ಎನ್ನಲಾಗಿದೆ.
ರೋಹಿಣಿ ಸಿಂಧೂರಿ ಅವರು ನನ್ನಿಂದ ಯಾವುದೇ ತಪ್ಪಾಗಿಲ್ಲ ಎಂದು ಸಿಎಂಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ವರ್ಗಾವಣೆ ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಗಾವಣೆ ತಡೆ ಅಸಾಧ್ಯ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.