ನಾಯಕತ್ವ ಬದಲಾವಣೆ: ವಲಸಿಗರಲ್ಲಿ ಹೆಚ್ಚಿದ ತಳಮಳ; ಮೂಲ ಬಿಜೆಪಿಗರಲ್ಲೂ ಆತಂಕ

ಬೆಂಗಳೂರು: ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ನೀಡಿರುವ ಹೇಳಿಕೆ ವಲಸಿಗರಲ್ಲಿ ತಳಮಳ ಉಂಟು ಮಾಡಿದ್ದರೆ, ಮೂಲ ಬಿಜೆಪಿಗರಲ್ಲಿ ಆತಂಕ ಸೃಷ್ಠಿಸಿದೆ.
ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಭಾನುವಾರ ಬೆಳಗ್ಗೆ ಹೇಳುವ ಮೂಲಕ ಶಾಕ್‍ನಂಥ ಸುದ್ದಿ ಕೊಟ್ಟಿದ್ದಾರೆ.
ಹೈಕಮಾಂಡ್ ಸೂಚಿಸಿದರೆ ನಾನು ರಾಜೀನಾಮೆ ನೀಡುತ್ತೇನೆ. ಪಕ್ಷದ ವರಿಷ್ಟರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ರಾಜ್ಯದಲ್ಲಿ ನಾಯಕತ್ವ ವಹಿಸಲು ಪರ್ಯಾಯ ನಾಯಕರಿದ್ದಾರೆ. ನಾನು ಯಾರ ಬಗ್ಗೆಯೂ ಟೀಕೆ ಮಾಡಲ್ಲ. ಪಕ್ಷ ನನಗೆ ಎಲ್ಲ ಅವಕಾಶ ನೀಡಿದೆ. ಪಕ್ಷದ ಹೈಕಮಾಂಡ್ ಹೇಳುವವರೆಗೂ ನಾನು ಸಿಎಂ ಆಗಿರುತ್ತೇನೆ. ಪಕ್ಷ ಯಾವುದೇ ಆದೇಶ ನೀಡಿದರೂ ಪಾಲಿಸಲು ಸಿದ್ದ ಎಂದು ಯಡಿಯೂರಪ್ಪ ಹೇಳುತ್ತಿದ್ದಂತೆ ಬಿಜೆಪಿಗೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ವಲಸೆ ಬಂದು ಸಚಿವರಾದವರು ಹಾಗೂ ಸಿಎಂ ಪಾಳೆಯದಲ್ಲಿ ಬೀಡುಬಿಟ್ಟವರೆಲ್ಲರೂ ಬೆಚ್ಚಿ ಬೆರಗಾಗಿದ್ದಾರೆ.
ಇದೆಲ್ಲ ಹೀಗಿದ್ದರೆ, ವಲಸಿಗ ಸಚಿವರಲ್ಲಿ ತೀವ್ರ ತಳಮಳ ಉಂಟಾಗಿದೆ. ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಅವರಿದ್ದರೆ ಮಾತ್ರ ತಮ್ಮ ಹಿತಕ್ಕೆ ಧಕೆ ಆಗುವುದಿಲ್ಲ. ಒಂದು ವೇಳೆ ಬಿಎಸ್‍ವೈ ಬದಲಾದರೆ ತಮಗೆ ಅಪಾಯ ತಪ್ಪಿದ್ದಲ್ಲ ಎಂಬುದು ಅವರ ನಂಬಿಕೆ ಆಗಿದೆ.
ಹಾಗಾಗಿ ವಲಸಿಗರು ಸಹಜವಾಗಿಯೇ ಸಿಎಂ ಹೇಳಿಕೆಯಿಂದ ಶಾಕ್ ಗೆ ಒಳಗಾಗಿದ್ದಾರೆ.
ಒಂದರ್ಥದಲ್ಲಿ ಬಿಜೆಪಿ ಹೈಕಮಾಂಡ್ ಈಗ ನಾಯಕತ್ವದ ಬಗ್ಗೆ ಕ್ಲೈಮ್ಯಾಕ್ಸ್‍ಗೆ ಬಂದು ನಿಂತಿರುವಂತೆ ಕಾಣುತ್ತಿದೆ. ಖಾತೆ ಕ್ಯಾತೆ, ರಮೇಶ್ ಜಾರಕಿಹೊಳಿ ಪ್ರಕರಣ, ಕೋವಿಡ್ ನಿರ್ವಹಣೆಯಲ್ಲಿ ಉಂಟಾದ ಅವ್ಯವಸ್ಥೆ, ಚಾಮರಾಜ ನಗರ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಸೋಂಕಿತರ ಸಾವು, ಮೈಸೂರಲ್ಲಿ ಐಎಎಸ್ ಅಧಿಕಾರಿಗಳ ಜಟಾಪಟಿ ಇತ್ಯಾದಿ ಕಾರಣಕ್ಕೆ ವಲಸಿಗರೂ ಸೇರಿ ಕೆಲ ಸಚಿವರ ಬಗ್ಗೆ ಬಿಜೆಪಿ ವರಿಷ್ಠರಿಗೆ ಸದಭಿಪ್ರಾಯ ಇಲ್ಲದಂತಾಗಿದೆ.
ಇನ್ನೊಂದೆಡೆ, ಯಡಿಯೂರಪ್ಪ ಅವರು ಬದಲಾದರೆ, ಅವರ ನಿಷ್ಠರು ಸೇರಿ ಬಹತೇಕ ವಲಸಿಗರ ಖಾತೆಗಳು ಬದಲಾಗುವುದು ಖಚಿತ. ಮುಖ್ಯವಾಗಿ ಮಹತ್ವದ ಖಾತೆಗಳನ್ನು ಹೊಂದಿರುವ ವಲಸಿಗರ ಪೆÇೀರ್ಟ್ ಪೆÇೀಲಿಯೋಗಳಿಗೆ ಆಪರೇಷನ್ ಆಗುವುದು ಗ್ಯಾರಂಟಿ. ಜತೆಗೆ, ಮೂಲ ನಿವಾಸಿಗಳಲ್ಲಿ ಕೆಲವರು ಔಟ್ ಆಗುವುದು ಕಾಯಂ. ಹೀಗಾಗಿ ಸಿಎಂ ಪರ ಇವರೆಲ್ಲರೂ ಬ್ಯಾಟಿಂಗ್ ಮಾಡುತ್ತಿದ್ದಾರೆಂದು ಬಿಜೆಪಿಗರು ಮಾತನಾಡಿಕೊಳ್ಳುತ್ತಿದ್ದಾರೆ.
ವಿಜಯೇಂದ್ರಗೆ ಎಚ್ಚರಿಕೆ ಕೊಟ್ಟ ಹೈ ಕಮಾಂಡ್
ಮೂರು ದಿನಗಳ ಕಾಲ ನವದೆಹಲಿಯಲ್ಲಿಯೇ ಉಳಿದು ತಂದೆಯ ಕುರ್ಚಿ ಸೇಫ್ ಮಾಡಲು ಶತಾಯಗತಾಯ ಪ್ರಯತ್ನಿಸಿದ್ದ ಬಿ.ವೈ.ವಿಜಯೇಂದ್ರ ಅವರ ಯಾವ ಮಾತಿಗೂ ಬಿಜೆಪಿ ಹೈ ಕಮಾಂಡ್ ಸೊಪ್ಪು ಹಾಕಿಲ್ಲ ಎಂದು ಬಿಜೆಪಿ ವಲಯದಲ್ಲಿ ಸುದ್ದಿ ಹರಡಿದೆ.
ಮುಖ್ಯವಾಗಿ, ಅರುಣ್ ಸಿಂಗ್ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಿದ್ದ ವಿಜಯೇಂದ್ರರಿಗೆ ಖಡಕ್ ಕ್ಲಾಸ್ ನ್ನು ತೆಗೆದುಕೊಳ್ಳಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ನೀವಿನ್ನೂ ಯುವಕರು. ಪಕ್ಷದಲ್ಲಿ ಒಳ್ಳೆಯ ಭವಿಷ್ಯವಿದೆ. ಇನ್ನು ಮುಂದೆ ಯಾರ ಸಚಿವರ ಖಾತೆಗಳಲ್ಲೂ ಹಸ್ತಕ್ಷೇಪ ಮಾಡಬೇಡಿ ಎಂದು ನಡ್ಡಾ ತಾಕೀತು ಮಾಡಿದರೆಂದು ಹೇಳಲಾಗಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಮಾಧ್ಯಮದವರು ಕೇಳದೆ ಇದ್ದರೂ ತಾವಾಗಿಯೇ ತಮ್ಮ ರಾಜಿನಾಮೆ ಬಗ್ಗೆ ಪ್ರಸ್ತಾಪಿಸಿರುವುದು ಅನುಮಾನ ಉಂಟು ಮಾಡಿದೆ.
ಇದೀಗ ಮುಂದಿನ ಮುಖ್ಯಮಂತ್ರಿ ಯಾರು? ಅವರ ಜತೆ ವಲಸಿಗರ ಹೊಂದಾಣಿಕೆ ಹೇಗೆ? ಎನ್ನುವ ಪ್ರಶ್ನೆ ಎದ್ದಿದೆ.