ಬೆಂಗಳೂರು: ಮೈಸೂರಿನ ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಭೂ ಹಗರಣ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಂಗಳವಾರ ಸಿದ್ದರಾಮಯ್ಯನವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಇಬ್ಬರು ಐಎಎಸ್ ಅಧಿಕಾರಿಗಳ ನಡುವಣ ಕಿತ್ತಾಟಕ್ಕೆ ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಭೂ ಹಗರಣ ಕಾರಣ ಎನ್ನಲಾಗುತ್ತಿದೆ. ಆ ಹಗರಣದ ಬಗ್ಗೆ ಸರ್ಕಾರ ಸ್ವತಂತ್ರ ಸಂಸ್ಥೆ ಮೂಲಕ ತನಿಖೆ ನಡೆಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪನಾಗ್ ಮತ್ತು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ನಡುವಣ ಜಗಳಕ್ಕೆ ಬಿಜೆಪಿಯ ಸಂಸದ, ಶಾಸಕರು ಹಾಗೂ ಜೆಡಿಎಸ್ ಮಾಜಿ ಸಚಿವರೊಬ್ಬರು ನೇರ ಕಾರಣ ಎಂದು ಆರೋಪ ಮಾಡಿದರು.
ಮೊದಲಿಗೆ ಒಬ್ಬ ಐಎಎಸ್ ಅಧಿಕಾರಿಯನ್ನು ಬಿಜೆಪಿಯವರು ಬೆಂಬಲಿಸಿದರು. ಅದರಲೂ ಸಂಸದ ಪ್ರತಾಪ್ ಸಿಂಹ ಮೊದಲು ರೋಹಿಣಿ ಸಿಂಧೂರಿ ಅವರ ಪರ ಇದ್ದರು. ಬಳಿಕ ವಿರೋಧ ವ್ಯಕ್ತ ಮಾಡಿದರು. ಇಬ್ಬರು ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದವರೇ ಬಿಜೆಪಿ ಶಾಸಕರು. ಇಂಥ ಸಂದರ್ಭದಲ್ಲಿ ಜಿಲ್ಲಾ ಮಂತ್ರಿ ಏನು ಮಾಡುತ್ತಿದ್ದರು? ಇದು ಅವರ ವೈಫಲ್ಯ ಅಲ್ಲವೇ ? ಎಂದು ಸಿದ್ದರಾಮಯ್ಯ ಕೇಳಿದರು.
ಸುದ್ದಿಗೋಷ್ಠಿ ಕರೆದು ಮಾತನಾಡಲು ಅಧಿಕಾರಿಗಳಿಗೆ ಅನುಮತಿ ನೀಡಿದವರು ಯಾರು? ಅನುಮತಿ ಇಲ್ಲದೆ ಸುದ್ದಿಗೋಷ್ಠಿ ಕರೆಯಲು ಅವಕಾಶ ಇಲ್ಲ ಎಂದವರು ಹೇಳಿದರು.
ವರ್ಗಾವಣೆ ಶಿಕ್ಷೆ ಅಲ್ಲ. ಸರ್ಕಾರ ಈ ಇಬ್ಬರೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರ ಶಕ್ತಿ ಕಳೆದುಕೊಂಡಿದೆ. ಆಡಳಿತವೇ ಇಲ್ಲದಂತೆ ಆಗಿರುವುದರಿಂದ ಅಧಿಕಾರಿಗಳು ಬೀದಿಗೆ ಬರಲು ಕಾರಣವಾಗಿದೆ ಎಂದು ಸಿದ್ದು ಹೇಳಿದರು.
ಭೂ ಹಗರಣದ ತನಿಖೆಗೆ ಮುಂದಾಗಿದ್ದೇ ನನ್ನ ವರ್ಗಾವಣೆಗೆ ಕಾರಣ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ. ಆ ಹಗರಣದ ಯಾವುದು ಎಂಬ ಬಗ್ಗೆ ತನಿಖೆ ಆಗಬೇಕು. ಯಾವ ಯಾವ ರಾಜಕಾರಣಿಗಳ ಭೂಮಿ ಹಗರಣಗಳಿವೆ. ಈ ವಿಷಯದಲ್ಲಿ ಯಾರ್ಯಾರು ಅಧಿಕಾರಿಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದರು ಎಂಬುದು ತನಿಖೆಯಿಂದ ಹೊರಬರಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದರು.
ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಾರಣ ಭೂ ಹಗರಣ -ಸಿದ್ದರಾಮಯ್ಯ ಆರೋಪ

