ಸಾ.ರಾ.ಕನ್ವೆನ್ಶನ್ ರಾಜಕಾಲುವೆ ಮೇಲಿದ್ದರೆ ರಾಜಕೀಯಕ್ಕೆ ಗುಡ್ ಬೈ; ಸುಳ್ಳಾದರೆ ರೋಹಿಣಿ ಸಿಂಧೂರಿ ಐಎಎಸ್ ಹುದ್ದೆಗೆ ರಾಜೀನಾಮೆ ನೀಡಬೇಕು -ಸಾ.ರಾ.ಮಹೇಶ್

ಮೈಸೂರು: ನನ್ನ ಒಡೆತನದ ಸಾ.ರಾ.ಕನ್ವೆನ್ಶನ್ ಸೆಂಟರ್ ರಾಜಕಾಲುವೆ ಮೇಲಿದೆ ಎಂಬುದು ತನಿಖೆಯಿಂದ ಸಾಬೀತಾದರೆ ನಾನು ಸಾರ್ವಜನಿಕರ ಜೀವನಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
ನಗರದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿ ಬಳಿ ಗುರುವಾರ ಸಾ.ರಾ.ಮಹೇಶ್ ಏಕಾಂಗಿ ಹೋರಾಟ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಒಂದು ವೇಳೆ ಆರೋಪ ಸುಳ್ಳೆಂದು ಸಾಬೀತಾದರೆ ರೋಹಿಣಿ ಸಿಂಧೂರಿಯವರು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಆಂಧ್ರಕ್ಕೆ ಹೋಗಿ ಮಕ್ಕಳನ್ನು ನೋಡಿಕೊಂಡು ಅಡುಗೆ ಮಾಡಿಕೊಂಡಿರಬೇಕು ಎಂದು ಸಾ.ರಾ.ಮಹೇಶ್ ಆಗ್ರಹಿಸಿದರು.
ಸಾ.ರಾ.ಕನ್ವೆನ್ಶನ್ ಸೆಂಟರ್ ರಾಜಕಾಲುವೆ ಮೇಲಿದೆ ಎಂದು ರೋಹಿಣಿ ಸಿಂಧೂರಿಯವರು ಆರೋಪಿಸಿದ್ದಾರೆ. ನನ್ನ ಒಡೆತನದಲ್ಲಿರತಕ್ಕ ಕಲ್ಯಾಣ ಮಂಟಪವನ್ನು ನಿಮ್ಮ ಉನ್ನತ ಅಧಿಕಾರಿಗಳಿಂದ ಅಳತೆ ಮಾಡಿಸಿ ಎಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ನೀಡಿದ್ದೇನೆ. ರಾಜ ಕಾಲುವೆ ಮೇಲೆ ನಿರ್ಮಿಸಿದ್ದರೆ ಆ ಕಟ್ಟಡ ಸೇರಿಸಿ ಸಾರ್ವಜನಿಕರ ಉಪಯೋಗಕ್ಕೆ, ಗವರ್ನರ್ ಅವರ ಹೆಸರಿಗೆ ನೋಂದಣಿಯನ್ನು ಮಾಡಿಕೊಡುತ್ತೇನೆ. ಜೊತೆಗೆ ನನ್ನ ಸಾರ್ವಜನಿಕರ ಜೀವನಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಸಾ. ರಾ. ಮಹೇಶ್ ತಿಳಿಸಿದರು.
ಅದನ್ನು ಅಧಿಕಾರಿಗಳು ಕ್ರಮಬದ್ಧವಾಗಿದೆ ಎಂದು ಹೇಳಿದರೆ ರೋಹಿಣಿ ಸಿಂಧೂರಿ ಅವರು ಐಎಎಸ್ ಗೆ ರಾಜೀನಾಮೆ ನೀಡಿ ಆಂಧ್ರಕ್ಕೆ ಹೋಗಿ ಮಕ್ಕಳನ್ನು ನೋಡಿಕೊಂಡು ಅಡಿಗೆ ಮಾಡಿಕೊಂಡಿರಬೇಕು ಇದು ನನ್ನ ಒತ್ತಾಯ ಎಂದರು.