ಲಾಕ್‍ಡೌನ್‍ನಲ್ಲೂ 8 ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಇಳಿದಿಲ್ಲ; ಡಿಸಿಗಳಿಗೆ ಬಿಸಿ ಮುಟ್ಟಿಸಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಕೋವಿಡ್ ಸೋಂಕು ತೀವ್ರವಾಗಿರುವ 8 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಸೋಂಕು ನಿಯಂತ್ರಣ ಕುರಿತಂತೆ ಚರ್ಚಿಸಿದರು.
ಸಿಎಂ ಬಿಎಸ್ ವೈ ಅವರು ಮೈಸೂರು, ಬೆಳಗಾವಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಮಂಡ್ಯ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು.
ಬಿಗಿ ಲಾಕ್‍ಡೌನ್ ಇದ್ದರೂ ಸೋಂಕಿನ ಪ್ರಮಾಣ ಈ ಜಿಲ್ಲೆಗಳಲ್ಲಿ ಕಡಿಮೆಯಾಗಿಲ್ಲ, ಯಾಕೆ? ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.
ಪಾಸಿಟಿವಿಟಿ ದರ ಕಡಿಮೆ ಮಾಡಲು ಎಲ್ಲ ಕ್ರಮ ಕೈಗೊಳ್ಳುವಂತೆ ಸೂªಚಿಸಿದರು.
ರಾಜ್ಯದ ಒಟ್ಟು ಪ್ರಕರಣಗಳಲ್ಲಿ 65 ಸಾವಿರ ಸಕ್ರಿಯ ಪ್ರಕರಣಗಳು ಈ ಎಂಟು ಜಿಲ್ಲೆಗಳಲ್ಲಿವೆ. ಈ ಜಿಲ್ಲೆಗಳಲ್ಲಿ ಸೋಂಕಿನ ಇಳಿಕೆಯ ಪ್ರಮಾಣ ಕಡಿಮೆ ಇದೆ. ಆದ್ದರಿಂದ ಪಾಸಿಟಿವಿಟಿ ದರವನ್ನು ಶೇ. 5ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ 2ನೇ ಅಲೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ಕಠಿಣ ನಿಬರ್ಂಧಗಳಿಂದಾಗಿ ಸೋಂಕಿನ ತೀವ್ರತೆ ಇಳಿಮುಖವಾಗುತ್ತಿದೆ. ಆದರೆ ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಮಂಡ್ಯ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ. ಜತೆಗೆ ಮೈಸೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿರುವ ಕುರಿತು ಮುಖ್ಯಮಂತ್ರಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು.