ಬೆಂಗಳೂರು: ಮೂರನೇ ಅಲೆ ಭೀತಿ ಇದ್ದರೂ ಎರಡನೇ ಅಲೆಯ ಅಬ್ಬರ ರಾಜ್ಯದ ಬಹುತೇಕ ಕಡೆ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಾಕ್‍ಡೌನ್ ನಿಬರ್ಂಧ ಸಡಿಲಿಸಿದ್ದಾರೆ.
ಇದೇ ವೇಳೆ ಸೋಂಕು ಇಳಿಮುಖವಾಗದ ಮೈಸೂರು, ಚಾಮರಾಜನಗರ ಹಾಗೂ ಕೊಡಗು ಸೇರಿದಂತೆ ಹನ್ನೊಂದು ಜಿಲ್ಲೆಗಳಲ್ಲಿ ಲಾಕ್‍ಡೌನ್ ಮುಂದುವರಿದಿದೆ. ಆದರೆ, ಪಾಸಿಟಿವಿಟಿ ದರ ಕಡಿಮೆಯಾಗಿರುವ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ನಿಬರ್ಂಧಗಳನ್ನು ಸಡಿಲಿಕೆ ಮಾಡಿ ಸೆಮಿಲಾಕ್ ಘೋಷಣೆ ಮಾಡಲಾಗಿದೆ ಎಂದು ಸಿಎಂ ಬಿ. ಎಸ್. ಯಡಿಯೂರಪ್ಪ ತಿಳಿಸಿದರು.
ತಾಂತ್ರಿಕ ಸಲಹಾ ಸಮಿತಿ ನೀಡಿದ ಸಲಹೆಗಳ ಆಧಾರದಲ್ಲಿ ಸದ್ಯಕ್ಕಿರುವ ನಿಬರ್ಂಧಗಳಲ್ಲಿ ಕೆಲವನ್ನು ಮಾತ್ರ ಬದಲಿಸುವ ಹಾಗೂ ಮಾರ್ಪಡಿಸುವ ಕೆಲಸವನ್ನು ಸಿಎಂ ಮಾಡಿದ್ದಾರೆ.
ಮುಖ್ಯಮಂತ್ರಿಗಳು ಪ್ರಕಟಿಸಿರುವ ಹೊಸ ಮಾರ್ಗಸೂಚಿ ಪ್ರಕಾರ 11 ಜಿಲ್ಲೆಗಳಲ್ಲಿ ಪುನಾ ಪೂರ್ಣ ಪ್ರಮಾಣದ ಲಾಕ್‍ಡೌನ್ ಮುಂದುವರಿದಿದೆ. ಉಳಿದ 19 ಜಿಲ್ಲೆಗಳಲ್ಲಿ ಸೆಮಿ ಲಾಕ್‍ಡೌನ್ ವಿಧಿಸಲಾಗಿದೆ.
ಅಲ್ಲದೆ, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ಸುಗಳ ಸಂಚಾರ ಸದ್ಯಕ್ಕೆ ಆರಂಭವಾಗುವುದಿಲ್ಲ. ಮುಂದಿನ ಆದೇಶದವರೆಗೆ ಸಾರ್ವಜನಿಕ ಸಾರಿಗೆ ಪುನಾರಂಭ ಆಗುವುದಿಲ್ಲ.
ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಹೆಚ್ಚಿರುವ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ, ಅಂದರೆ; ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರಿಯುತ್ತದೆ. ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಉಸ್ತುವಾರಿ ಸಚಿವರುಗಳೊಂದಿಗೆ ಸಮಾಲೋಚಿಸಿ ಇನ್ನೂ ಹೆಚ್ಚಿನ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅಧಿಕಾರ ನೀಡಲಾಗಿದೆ.
ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಈ ಕೆಳಕಂಡ ಸಡಿಲಿಕೆಗಳೊಂದಿಗೆ ಜೂನ್ 14ರಿಂದ ಬೆಳಗ್ಗೆ 6 ಗಂಟೆಯಿಂದ ಜೂನ್ 21ರ ಬೆಳಗ್ಗೆ 6 ಗಂಟೆಯವರೆಗೆ ಸೆಮಿ ಲಾಕ್‍ಡೌನ್ ಜಾರಿಯಲ್ಲಿರುತ್ತದೆ.
ಎಲ್ಲಾ ಕಾರ್ಖಾನೆಗಳನ್ನು ಶೇ.50ರಷ್ಟು ಸಿಬ್ಬಂದಿ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ. ಆದರೆ, ಗಾಮೆರ್ಂಟ್ ಇಂಡಸ್ಟ್ರೀಗಳು ಶೇ.30ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಎಲ್ಲಾ ಅಗತ್ಯ ಅಂಗಡಿಗಳನ್ನು ಈಗಿರುವ ಸಮಯ ಬೆಳಗ್ಗೆ 6ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ ಹಾಗೂ ನಿಮಾಣ ಚಟುವಟಿಕೆ ಸಂಬಂಧಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ ನಿಡಲಾಗಿದೆ.
ಪಾರ್ಕುಗಳನ್ನು ಬೆಳಗ್ಗೆ 5ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
ಬೀದಿ ಬದಿ ವ್ಯಾಪಾರಿಗಳು ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
ಕೋವಿಡ್ ಕಫ್ರ್ಯೂ ರಾತ್ರಿ 7 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ವಾರಾಂತ್ಯದ ಕಫ್ರ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಉಳಿದಂತೆ ವಿವರವಾದ ಮಾರ್ಗಸೂಚಿಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

