ಮುಂದಿನ ಎರಡು ವರ್ಷ ನಾನೇ ಸಿಎಂ -ಬಿ. ಎಸ್. ಯಡಿಯೂರಪ್ಪ

ಹಾಸನ: ಮುಂದಿನ ಎರಡು ವರ್ಷ ನಾನೇ ಸಿಎಂ ಆಗಿ ರಾಜ್ಯದ ಅಭಿವೃದ್ಧಿಗೆ ಗಮನ ಕೊಡುವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಹಾಸನದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಬಿಎಸ್ ವೈ ಮಾತನಾಡಿದರು.
ಕೇಂದ್ರದ ನಾಯಕರು ನನ್ನ ಮೇಲೆ ವಿಶ್ವಾಸ ಇಟ್ಟು ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ ಎಂದಿದ್ದಾರೆ ಎಂದು ಅವರು ಹೇಳಿದರು.
ಎಲ್ಲರ ಸಹಕಾರದಿಂದ ರಾಜ್ಯದ ಅಭಿವೃದ್ಧಿಯತ್ತ ಗಮನ ನೀಡುವೆ. ಪ್ರಾಮಾಣಿಕವಾಗಿ ಅಭಿವೃದ್ಧಿ ಪರ ಕೆಲಸ ಮಾಡುತ್ತೇನೆ ಎಂದು ಸಿಎಂ ಬಿಎಸ್ ವೈ ಹೇಳಿದರು.

ಅರುಣ್ ಸಿಂಗ್ ಹೇಳಿಕೆಯಿಂದ ನನಗೆ ಬಲ ಬಂದಿದೆ. ಬಿಎಸ್ ವೈ ನೇತೃತ್ವದಲ್ಲಿ ಒಳ್ಳೆಯ ಕೆಲಸವಾಗುತ್ತಿದೆ ಎಂದಿದ್ದಾರೆ. ಇದರಿಂದ ನನ್ನ ಜವಾಬ್ದಾರಿ ಜಾಸ್ತಿ ಆಗಿದೆ. ನನ್ನ ಮೇಲೆ ಪ್ರಧಾನಿ ಮೋದಿ, ಅಮಿತ್ ಶಾ ಇಟ್ಟುಕೊಂಡಿರುವ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುವೆ ಎಂದರು.
ರಾಜ್ಯದಲ್ಲಿ ಹಣಕಾಸು ಸ್ಥಿತಿ ಹದಗೆಟ್ಟಿದೆ. ಆದರೂ ಬಡವರ ಅನುಕೂಲಕ್ಕೆ ಪ್ಯಾಕೇಜ್ ಘೋಷಣೆ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡಿ ಕೋವಿಡ್ ಪರಿಸ್ಥಿತಿ ಸಭೆ ನಡೆಸುತ್ತೇವೆ ಎಂದ ಅವರು ಹಾಸನ ಜಿಲ್ಲೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಹೆಚ್ಚಿದೆ ಎಂದು ತಿಳಿಸಿದರು.
ಕೋವಿಡ್‍ನಿಂದ ಜನ ಸಾವಿಗೀಡಾಗುತ್ತಿರುವುದಕ್ಕೆ ಸರ್ಕಾರವೇ ಕಾರಣ ಎಂಬ ರೇವಣ್ಣ ಹೇಳಿಕೆಗೆ ಕಿಡಿಕಾರಿದ ಸಿಎಂ, ಜವಾಬ್ದಾರಿಯುತ ಶಾಸಕರಾಗಿ ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಅವರೂ ಕೂಡ ಶಾಸಕರಾಗಿ ಕೆಲಸ ನಿರ್ವಹಿಸಬೇಕಿದೆ. ಅವರ ಕೆಲಸ ನಿರ್ವಹಿಸದೆ ಬೇರೆಯವರ ಬಗ್ಗೆ ಬೊಟ್ಟು ತೋರಿಸಬಾರದು ಎಂದರು.
ಕೋವಿಡ್ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ವಿರೋಧ ಪಕ್ಷದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸುಳ್ಳು ಲೆಕ್ಕ ಕೊಡುತ್ತೇವೆ ಅಂದಿದ್ದು ಯಾರು? ಅದರಿಂದ ನಮಗೇನು ಲಾಭ ಎಂದು ಪ್ರಶ್ನಿಸಿದರು.
ಕೊರೊನಾ ಮೂರನೇ ಅಲೆ ಬಗ್ಗೆ ಯಾವುದೇ ಅನಾಹುತ ಆಗದಂತೆ ಸಿದ್ಧತೆ ಮಾಡುತ್ತಿದ್ದೇವೆ ಎಂದು ಬಿಎಸ್ ವೈ ಹೇಳಿದರು.
ಆರೋಗ್ಯ ಸಚಿವ ಕೆ.ಸುಧಾಕರ್. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಎಚ್.ಡಿ.ರೇವಣ್ಣ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದ ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಸಿಎಂ ಖಡಕ್ ಸೂಚನೆಗಳನ್ನು ನೀಡಿದರು.
ಪಾಸಿಟಿವಿಟಿ ದರ ಕಡಿಮೆ ಆಗಬೇಕು. ಅದಕ್ಕೆ ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಿ. ಎಲ್ಲ ಕಡೆ ಟ್ರಾಯಾಜಿಂಗ್ ಮಾಡಿ. ಹೊರಗಿನಿಂದ ಬಂದವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ. ಸೋಂಕು ಪ್ರಮಾಣ ಇನ್ನು ಹೆಚ್ಚಲು ಅವಕಾಶ ನೀಡಬಾರದು ಎಂದು ಜಿಲ್ಲಾಡಳಿತಕ್ಕೆ ತಾಕೀತು ಮಾಡಿದರು.
ಸೋಂಕಿನಿಂದ ರಾಜ್ಯಕ್ಕೆ ಕಷ್ಟಕಾಲ ಬಂದಿದೆ. ಇದನ್ನು ನಾವೆಲ್ಲರೂ ಒಟ್ಟಾಗಿ ಎದುರಿಸಬೇಕು. ರಾಜಕೀಯ ಬೆರೆಸಬಾರದು ಎಂದು ಸಿಎಂ ಕಿವಿಮಾತು ಹೇಳಿದರು.