ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ -ಸಿಎಂ ಬಿಎಸ್ ವೈ

ಬೆಂಗಳೂರು: ಕೊರೊನಾದಿಂದ ಸಾವನ್ನಪ್ಪಿದವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು.
ಕೊರೊನಾದಿಂದ ಮೃತಪಟ್ಟವರ ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ. ಒಂದು ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಅಪ್ರಾಪ್ತರು ಕೊರೊನಾದಿಂದ ಬಲಿಯಾದರೆ ಪರಿಹಾರ ಇಲ್ಲ ಎಂದು ಯಡಿಯೂರಪ್ಪನವರು ಹೇಳಿದರು.
ಕೋವಿಡ್-19 ನಿಂದ ಕುಟುಂಬದ ದುಡಿಯುವ ವ್ಯಕ್ತಿ ಮೃತಪಟ್ಟ ಬಿಪಿಎಲ್ ಕಾರ್ಡು ಹೊಂದಿರುವ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಿದ್ದು, ರಾಜ್ಯದಲ್ಲಿ 25ರಿಂದ 30 ಸಾವಿರ ಇಂತಹ ಕುಟುಂಬಗಳಿವೆ ಎಂದು ಸಿಎಂ ತಿಳಿಸಿದರು.
ಕೊರೊನಾದಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರವಾಗಿ ಸರ್ಕಾರ 250ರಿಂದ 300 ಕೋಟಿ ರೂ. ಪ್ಯಾಕೇಜ್ ನೀಡಲಿದೆ ಎಂದರು.
ದೇಶದಲ್ಲಿಯೇ ಕರ್ನಾಟಕ ಸರ್ಕಾರ ಈ ರೀತಿಯ ಕೋವಿಡ್-19 ಆರ್ಥಿಕ ಪ್ಯಾಕೇಜ್ ನೀಡುತ್ತಿದೆ ಎಂದು ಮುಖ್ಯಮಂತ್ರಿ ಬಿಎಸ್ ವೈ ತಿಳಿಸಿದರು.
ಕೊರೊನಾದಿಂದ ಹಲಮಂದಿಯ ಬಡಕುಟುಂಬಗಳು ಬೀದಿಗೆ ಬಂದಿವೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.