ಬೆಂಗಳೂರು: ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಆಸ್ಪತೆಯಲ್ಲಿ ಹಾಸಿಗೆ, ಚಿಕಿತ್ಸೆ, ಆಕ್ಸಿಜನ್, ಔಷಧಿ, ಕೊನೆಗೆ ಶವ ಸಂಸ್ಕಾರ ಸೇರಿ ಎಲ್ಲದಕ್ಕೂ ಜನ ಕ್ಯೂ ನಿಲ್ಲುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಬಡವರಿಗೆ ಆಹಾರ ಕಿಟ್ ಹಾಗೂ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಶನಿವಾರ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಪ್ರತಿಯೊಂದು ವಿಚಾರಕ್ಕೂ ನಿಮ್ಮನ್ನೆಲ್ಲ ಕ್ಯೂ ನಿಲ್ಲಿಸಿದರಲ್ಲಾ ಅಂತಾ ಸಂಕಟವಾಗುತ್ತಿದೆ. ನೋಟು ರದ್ದು ಮಾಡಿ, ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ಕ್ಯೂ ನಿಲ್ಲಿಸಿ ಸಾಯಿಸಿದರು. ನಂತರ ಆಧಾರ್ ಜೋಡಣೆ ವಿಚಾರವಾಗಿ ಮತ್ತೆ ಬ್ಯಾಂಕ್ ಮುಂದೆ ಕ್ಯೂ ನಿಲ್ಲಿಸಿದರು. ದೇಶಕ್ಕೆ ಮಹಾಮಾರಿ ಕರೆತಂದು, ಆಸ್ಪತ್ರೆ ಮುಂದೆ ಕ್ಯೂ, ಆಂಬುಲೆನ್ಸ್ ಗೂ ಕ್ಯೂ, ಔಷಧಿಗೂ ಕ್ಯೂ, ಆಕ್ಸಿಜನ್ ಗೂ ಕ್ಯೂ, ಕೊನೆಗೆ ಶವ ಸಂಸ್ಕಾರಕ್ಕೂ ಕ್ಯೂ ನಿಲ್ಲಿಸಿದರು ಎಂದು ಡಿಕೆಶಿ ಹೇಳಿದರು.
ಈಗ ಆಹಾರ ಕಿಟ್ ಕೊಡಲು ನಾವು ನಿಮ್ಮನ್ನು ಕ್ಯೂ ನಿಲ್ಲಿಸಿದ್ದೇವೆ. ಇದು ಸರ್ಕಾರದ ಆಹಾರ ಕಿಟ್ ಅಲ್ಲ, ಕಾಂಗ್ರೆಸ್ ನಾಯಕರು ತಮ್ಮ ಶ್ರಮದಿಂದ ಸಂಪಾದಿಸಿದ ಸ್ವಂತ ಹಣದಲ್ಲಿ ನೀಡುತ್ತಿರುವ ಕಿಟ್. ಬೆಂಗಳೂರಿನಿಂದ ದಿಲ್ಲಿವರೆಗೆ ದೇಶದಲ್ಲಿ ನೀವು ಬದಲಾವಣೆ ತರಬೇಕು.
ಚುನಾವಣೆ ಕಾರಣಕ್ಕೆ ನಾವು ಇಲ್ಲಿಗೆ ಬಂದು ಈ ಕಾರ್ಯಕ್ರಮ ಮಾಡುತ್ತಿಲ್ಲ. ದೇಶದೆಲ್ಲೆಡೆ ಜನ ಸಂಕಟದಲ್ಲಿದ್ದು, ಅವರಿಗೆ ಸಹಾಯ ಮಾಡಲು ನಾವು ಈ ಇಲ್ಲಿಗೆ ಬಂದಿದ್ದೇವೆ ಎಂದರು.
ಮುಂದಿನ ದಿನಗಳಲ್ಲಿ ಕಾಪೆರ್Çರೇಷನ್ ಚುನಾವಣೆ ಬರುತ್ತಿದೆ, ವಿಧಾನಸಭೆ ಚುನಾವಣೆಯೂ ಬರಲಿದೆ. ನೀವು ಬಿಜೆಪಿಯವರಿಗೆ ಬುದ್ದಿ ಕಲಿಸಬೇಕು. ಎಂದು ಡಿಕೆಶಿ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಎಲ್ಲದಕ್ಕೂ ಕ್ಯೂ -ಡಿ.ಕೆ. ಶಿವಕುಮಾರ್

