ಬೆಂಗಳೂರು: ಕೊವಿಡ್‍ನಿಂದ ಶುಕ್ರವಾರ ನಿಧನರಾದ ಕವಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ಸರಕಾರದ ಗೌರವ-ಮರ್ಯಾದೆಗಳೊಂದಿಗೆ ನಡೆಯಿತು.
ಸರಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಅಂತಿಮ ನಮನ ಸಲ್ಲಿಸಿ ಗೌರವ ಸಮರ್ಪಣೆ ಮಾಡಿದರು.
ಅವರ ಜತೆಯಲ್ಲಿ ಶಾಸಕ ಮುನಿರತ್ನ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ಗೌರವ ಗುಪ್ತ ಅಗಲಿದ ಚೇತನಕ್ಕೆ ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಅವರು, ರಾಜ್ಯ ಕಂಡ ಶ್ರೇಷ್ಠ ಸಾಹಿತಿ. ದಮನಿತರ ದನಿಯಾಗಿದ್ದವರು ಡಾ.ಸಿದ್ದಲಿಂಗಯ್ಯ. ಅವರ ನಿಧನ ಬಹಳ ನೋವಿನ ಸಂಗತಿ. ತಮ್ಮ ಬದುಕು, ನೋವುಗಳನ್ನೇ ಸಾಹಿತ್ಯವಾಗಿ ಬರೆದವರು ಅವರು ಎಂದರು.
ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ಕಲಾಗ್ರಾಮದಲ್ಲಿ ನೆರವೇರಿಸಲಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ನಾವೆಲ್ಲರೂ ಪ್ರಾರ್ಥನೆ ಮಾಡೋಣ ಎಂದು ಡಿಸಿಎಂ ಹೇಳಿದರು.

