ಹೊರಗಿನಿಂದ ಬಂದವರು ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ -ಕೃಷಿ ಸಚಿವ ಬಿ ಸಿ ಪಾಟೀಲ್

ಮೈಸೂರು: ಹೊರಗಿನಿಂದ ಬಂದವರು ಒಳಗಿಂದ ಬಂದವರು ಎಂಬ ಪ್ರಶ್ನೆಯೇ ಇಲ್ಲ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದರು.
ಮೈಸೂರಿನಲ್ಲಿ ಕೃಷಿ ಸಚಿವರು ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಆ ತರಹದ ಯಾವ ಭಾವನೆಗಳು ಇಲ್ಲ. ಟೀಕೆ ಟಿಪ್ಪಣಿಗಳು ಸಹಜ. ಐದು ಬೆರಳುಗಳ ಸಮಾನವಾಗಿರುವುದಿಲ್ಲ. ಮನೆಯಲ್ಲಿ ಅಣ್ಣ ತಮ್ಮಂದಿರ ನಡುವೆ ವ್ಯತ್ಯಾಸ ಇರುತ್ತದೆ. ವ್ಯತ್ಯಾಸಗಳು ಸಹಜ ಎಂದು ಕೃಷಿ ಸಚಿವರು ತಿಳಿಸಿದರು.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮನ ಹಿನ್ನೆಲೆಯಲ್ಲಿ ಉಸ್ತುವಾರಿ ಜೊತೆ ಇಂದು ಸಂಜೆ ಸಭೆ ಇದೆ. ಎಲ್ಲರೂ ಸಭೆಗೆ ಬರುವಂತೆ ಆಹ್ವಾನ ಇದೆ ಎಂದು ಅವರು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪ್ರತ್ಯೇಕವಾಗಿ ಮಾತನಾಡುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಹೇಗೆ ಮಾಡುತ್ತಾರೆ ನೋಡೋಣ ಎಂದರು.
ಯಡಿಯೂರಪ್ಪ ಪರವಾಗಿ ಸಹಿ ಸಂಗ್ರಹ ವಿಚಾರಕ್ಕೆ ಪ್ರತಿಕ್ರಿಯಿಸಿ ಸಹಿ ಸಂಗ್ರಹ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಈ ರೀತಿಯ ಯಾವ ಬೆಳವಣಿಗೆಗಳೂ ಸರಿಯಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ ಪಕ್ಷದ ಚೌಕಟ್ಟಿನಲ್ಲೇ ಚರ್ಚೆಯಾಗಬೇಕು. ಹಾದಿ ಬೀದಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಬಾರದು ಎಂದರು.
ನನ್ನ ಅಧಿಕಾರ ನನ್ನ ಮಗ ಚಲಾಯಿಸುವುದು ನನಗೆ ಇಷ್ಟ ಇಲ್ಲ ಎಂದು ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರಲ್ಲ ಎಂದಾಗ, ಯೋಗೇಶ್ವರ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಬಾರದು. ಏನಾದರೂ ಹೇಳುವುದಿದ್ದರೆ ಸ್ಪಷ್ಟವಾಗಿ ಹೇಳಲಿ ಎಂದರು.
ರಾಜ್ಯದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಯಾವುದೇ ಸಮಸ್ಯೆ ಇಲ್ಲ. ಇಂದು ಮೈಸೂರಿನಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದೇನೆ. ರೈತರ ಬಾಕಿ ಹಣ ಬಿಡುಗಡೆ ಮಾಡಲಾಗಿದೆ. ಯಾವುದೇ ಹಣ ಬಾಕಿ ಇರುವುದಿಲ್ಲ. 14 ಬೆಳೆಗಳಿಗೆ ಬೆಂಬಲ ಬೆಲೆ ಈಗಾಗಲೇ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.