ಬೆಂಗಳೂರು: ಆಸ್ಪತ್ರೆಗೆ ಹಣ ಕಟ್ಟಲಾಗದೆ ಪರದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಬಿಲ್ ಕಟ್ಟಲಾಗದೆ, ಹೆಣ ತರಲಾಗದ ಸ್ಥಿತಿಯೂ ಹಲವರಿಗಿದೆ. ಹೀಗಾಗಿ ಜನಸಾಮಾನ್ಯರು ಕೋವಿಡ್ ಚಿಕಿತ್ಸೆಗೆ ವೆಚ್ಚ ಮಾಡಿರುವ ಹಣವನ್ನು ಹಿಂದಿರುಗಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಬೆಂಗಳೂರಿನ ಜಯನಗರ, ಬಿಟಿಎಂ ಬಡಾವಣೆಯಲ್ಲಿ ಶಾಸಕಿ ಸೌಮ್ಯಾ ರೆಡ್ಡಿ, ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಆಯೋಜಿಸಿದ್ದ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿ.ಕೆ. ಶಿವಕುಮಾರ್ ಅವರು ನಂತರ ಮಾಧ್ಯಮ ಪ್ರತಿನಿಧಿಗಳೊಮದಿಗೆ ಮಾತನಾಡಿದರು.
ಮಾಧ್ಯಮಗಳ ವರದಿ ಪ್ರಕಾರ ಜನಸಾಮಾನ್ಯರು ತಮ್ಮ ಬಳಿ ಇದ್ದ ಚಿನ್ನಾಭರಣ ಒತ್ತೆ ಇಟ್ಟು ಜೀವನ ನಡೆಸುತ್ತಿದ್ದಾರೆ. ಅವರ ಸಾಲ ಮನ್ನಾ ಮಾಡಿ ಎಂದು ನಾನು ಕೇಳುವುದಿಲ್ಲ. ಆದರೆ ಆಸ್ಪತ್ರೆ ಬಿಲ್ ಕಟ್ಟಲಾಗದೆ ಒದ್ದಾಡುತ್ತಿರುವವರಿಗೆ ನೆರವಾಗಿ. ಆಸ್ಪತ್ರೆ ಸೇರಿದವರ ಖರ್ಚು 5 ಲಕ್ಷ ರುಪಾಯಿಗಿಂತ ಕಡಿಮೆ ಆಗಿಲ್ಲ. ಆಸ್ಪತ್ರೆಗೆ ಹೋದವರಲ್ಲಿ ಸಾಕಷ್ಟು ಜನ ಹೆಣವಾಗಿ ಬಂದರು. ಕುಟುಂಬ ಸದಸ್ಯರು ಸತ್ತರೆ, ಆಸ್ಪತ್ರೆ ಬಿಲ್ ಕಟ್ಟಿ ಹೆಣ ತರಲಾಗದ ಸ್ಥಿತಿ ಹಲವರಿಗಿದೆ. ಇವರಿಗೆ ಸರ್ಕಾರ ನೆರವಾಗಬೇಕು ಎಂದರು.
ಇಂತಹ ಕೆಟ್ಟ ಸರ್ಕಾರವನ್ನು ನಾವು ಇದುವರೆಗೂ ನೋಡಿಲ್ಲ. ಈ ಸಮಸ್ಯೆಯಿಂದ ಮುಕ್ತಿ ಸಿಗಬೇಕಾದರೆ ಜನ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.
ನಮ್ಮ ನಾಯಕರು ಆಹಾರ ಕಿಟ್, ತರಕಾರಿ ಹಾಗೂ ಮೆಡಿಕಲ್ ಕಿಟ್ ಗಳನ್ನು ತಮ್ಮ ಸ್ವಂತ ಹಣದಿಂದ ನೀಡುತ್ತಿದ್ದಾರೆ. ಕಾರ್ಮಿಕ ಸಚಿವಾಲಯದಿಂದ ಬಂದ ಫುಡ್ ಕಿಟ್ ಮೇಲೆ ತಮ್ಮ ಫೆÇೀಟೋ ಹಾಕಿಕೊಂಡು ಹಂಚುತ್ತಿಲ್ಲ ಎಂದು ಡಿಕೆಶಿ ತಿಳಿಸಿದರು.
ಬಿಜೆಪಿ ಆಂತರಿಕ ಕಚ್ಚಾಟದ ಕುರಿತು ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ ಅವರು, ಬಿಜೆಪಿ ಬಂದಾಗಲೆಲ್ಲ ಈ ಸಮಸ್ಯೆ ಉದ್ಭವಿಸುತ್ತಿದೆ. ನಮ್ಮಲ್ಲಿಯೂ ಈ ಹಿಂದೆ ಇಂತಹ ಪರಿಸ್ಥಿತಿ ಇತ್ತು. ಅದರಿಂದ ಪಾಠ ಕಲಿತು ನಾವು ತಪ್ಪು ತಿದ್ದುಕೊಂಡಿದ್ದೇವೆ ಎಂದರು.
ಮಂತ್ರಿಗಳು ಹಾಗೂ ಶಾಸಕರು ಮುಖ್ಯಮಂತ್ರಿ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರು ಬಲಿಷ್ಠ ನಾಯಕ ಅಂದುಕೊಂಡಿದ್ದೆ. ಆದರೆ ಆಡಳಿತ ವಿಚಾರದಲ್ಲಿ ಬಹಳ ದುರ್ಬಲರಾಗಿದ್ದಾರೆ. ಬಿಜೆಪಿಗೆ ಯಾಕಾದರೂ ಅಧಿಕಾರ ಕೊಟ್ಟೆವು ಎಂದು ಜನರಿಗೆ ವೈರಾಗ್ಯ ಬಂದಿದೆ ಎಂದು ತಿಳಿಸಿದರು.
ಸರಕಾರದ ದೌರ್ಬಲ್ಯ ಕುರಿತು ಸತ್ಯಾಂಶ ಒಪ್ಪಿಕೊಂಡ ಈಶ್ವರಪ್ಪ ಅವರಿಗೆ ಅಭಿನಂದನೆಗಳು. ಮೊದಲು ಅವರ ಆಟ ಮುಗಿಯಲಿ ಎಂದು ಡಿಕೆಶಿ ಮಾರ್ಮಿಕವಾಗಿ ಹೇಳಿದರು.
ಬಾಂಬೆ ಟೀಮ್ ನಿಂದ ಗೊಂದಲವಾಗುತ್ತಿದೆ ಎಂಬ ಈಶ್ವರಪ್ಪ ಅವರ ಈಗಿನ ಹೇಳಿಕೆ ಬಗ್ಗೆ ನಾನು ಈ ಹಿಂದೆಯೇ ವಿಧಾನಸಭೆಯಲ್ಲೇ ಭವಿಷ್ಯ ನುಡಿದಿದ್ದೆ. ಈಶ್ವರಪ್ಪ ಅವರ ಈ ಟೀಕೆಗೆ ಬಿ.ಸಿ. ಪಾಟೀಲ್ ಉತ್ತರ ಕೊಟ್ಟಿದ್ದಾರೆ ಎಂದರು.
ಕೋವಿಡ್ ಚಿಕಿತ್ಸೆಗೆ ಜನಸಾಮಾನ್ಯರು ಕಟ್ಟಿರುವ ಹಣ ಹಿಂದಿರುಗಿಸಿ ಸರ್ಕಾರಕ್ಕೆ ಡಿ.ಕೆ. ಶಿವಕುಮಾರ್ ಮನವಿ

