ಮೈಸೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತ ಮೈಸೂರು ನಗರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಶನಿವಾರ ನೂರು ಮಂದಿ ಸಾರ್ವಜನಿಕರಿಗೆ ಒಂದು ರೂ.ಗೆ ಪೆಟ್ರೋಲ್ ಹಾಕಿಸುವ ಮೂಲಕ ಬೆಲೆ ಏರಿಕೆಯನ್ನು ಖಂಡಿಸಿ ಅಣುಕು ಪ್ರದರ್ಶನ ನಡೆಸಲಾಯಿತು.
ನಗರದಲ್ಲಿನ ಆರ್ ಟಿ ಒ ಕಛೇರಿ ಬಳಿಯಲ್ಲಿರುವ ಪೆಟ್ರೋಲ್ ಬಂಕ್ ನಲ್ಲಿ ಸಾರ್ವಜನಿಕರಿಗೆ ಒಂದು ರೂ.ನಲ್ಲಿ ಪೆಟ್ರೋಲ್ ಹಾಕಿಸಿ ಗುಲಾಬಿ ಹೂ. ನೀಡಲಾಯಿತು. ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಮಾಜಿ ಎಐಸಿಸಿ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ನಗರದಲ್ಲಿ ನಗರ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಎರಡನ್ನೂ ಒಳಗೊಂಡಂತೆ ಸರಿಸುಮಾರು ನೂರು ಜನರಿಗೆ ಒಂದು ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ದೇವೆ. ಇಡೀ ದೇಶದಲ್ಲಿ ಪೆಟ್ರೋಲ್ ಬೆಲೆ 100ರ ಗಡಿ ದಾಟಿದೆ. ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ 112 ಡಾಲರ್ ಇದ್ದ ಕಚ್ಚಾ ತೈಲ ಬೆಲೆ 60ರಿಂದ 62ಡಾಲರ್ ಗೆ ಇಳಿದಿದ್ದರೂ ಕೇಂದ್ರ ಸರ್ಕಾರ ಪೆಟ್ರೋಲ್ ಬೆಲೆಯನ್ನು ಇಳಿಸದೇ ಮೂರುವರೆ ಲಕ್ಷ ಕೋಟಿ ರೂ. ಆದಾಯ ಕಣ್ಣಲ್ಲಿಟ್ಟು ಬಡಬಗ್ಗರಿಗೆ ಕಣ್ಣೀರು ಹಾಕಿಸುತ್ತಿದ್ದಾರೆ. ಇದಕ್ಕೆ ನಾವು ಅಣುಕು ಪ್ರದರ್ಶನ ರೀತಿಯಲ್ಲಿ ರಾಹುಲ್ ಗಾಂಧಿಯವರ ಜನ್ಮದಿನವನ್ನು ಒಂದು ರೂ.ಗೆ ಪೆಟ್ರೋಲ್ ಹಾಕಿಸುವ ಮೂಲಕ ಗುಲಾಬಿ ಹೂ ನೀಡುವ ಮೂಲಕ ಆಚರಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹ್ಯಾರಿಸ್, ಫೈಲ್ವಾನ್ ಸುನೀಲ್, ಚೇತನ್, ರಾಜೇಶ್, ಪವನ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೂರ್ತಿ, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.

