ನವದೆಹಲಿ: ಬಿಜೆಪಿಯಲ್ಲಿ ರಾಜೀನಾಮೆ ನೀಡುವ ಬ್ಲಾಕ್ ಮೇಲ್ ಗಳು ನಡೆಯುತ್ತಲೇ ಇವೆ. ನಾನ್ಯಾಕೆ ಅವರ ವಿಚಾರ ಮಾತನಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿಚಕುಮಾರ್ ಹೇಳಿದ್ದಾರೆ.
ನವದೆಹಲಿಯಲ್ಲಿ ಸೋಮವಾರ ಡಿಕೆಶಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಒದಗಿಸಲು ಹೋರಾಟ ಮಾಡುತ್ತಿದ್ದೇವೆ. ರಾಜ್ಯದ ಜನ ಕೂಡ ಎಲ್ಲವನ್ನು ನೋಡುತ್ತಿದ್ದಾರೆ. ವಿರೋಧ ಪಕ್ಷವಾಗಿ ನಾವು ಈ ವಿಚಾರದಲ್ಲಿ ಸುಮ್ಮನೆ ಕೂರುವುದಿಲ್ಲ. ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಉತ್ತರ ಕೊಡಬೇಕು ಎಂದರು. ತಮಿಳುನಾಡಿನಲ್ಲಿ ಮಾಜಿ ಸಚಿವರ ಅತ್ಯಾಚಾರ ಪ್ರಕರಣ ಏನಾಗಿದೆ? ಕರ್ನಾಟಕದಲ್ಲಿ ಯಾಕಾಗುತ್ತಿಲ್ಲ? ರಾಜ್ಯದ ಪೊಲೀಸ್ ವ್ಯವಸ್ಥೆ ಹಾಗೂ ಕಾನೂನಿಗೆ ಕಳಂಕ ಬರುತ್ತಿದೆ. ಆರೋಪಿಗಳಿಗೆ ರಕ್ಷಣೆ ನೀಡಲಾಗುತ್ತಿದೆ. ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆಂದು ಡಿಕೆಶಿ ಆರೋಪಿಸಿದರು.
ಕುಮಾರಸ್ವಾಮಿ ಅವರ ಸರ್ಕಾರ ಸಮಯದಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಯಡಿಯೂರಪ್ಪನವರು ಸಿಬಿಐಗೆ ಕೊಟ್ಟರು. ಈಗ ಅವರದೇ ಸರ್ಕಾರ, ಅವರದೇ ಪಕ್ಷದ ಶಾಸಕರು ಆರೋಪ ಮಾಡಿದ್ದು, ಈಗಲೂ ಸಿಬಿಐಗೆ ನೀಡಲಿ. ಹಳೇ ಪ್ರಕರಣದಲ್ಲಿ ಸಿಬಿಐನವರು ನಮ್ಮ ನಾಯಕರಾದ ಬ್ರಿಜೇಶ್ ಕಾಳಪ್ಪ ಅವರಿಗೆ ನೋಟೀಸ್ ಕೊಟ್ಟು ವಿಚಾರಣೆ ನಡೆಸಿದ್ದರು ಎಂದು ಅವರು ಹೇಳಿದರು.
ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ
ಯಾವುದೇ ನಾಯಕರಾದರೂ ಪಾಲಿಕೆ ಹಾಗೂ ಪಂಚಾಯಿತಿ ಚುನಾವಣೆ ಗೆಲ್ಲಬೇಕು. ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಯಾರಾಗಬೇಕು ಎಂದು ತೀರ್ಮಾನ ಮಾಡೋರು ದೆಹಲಿ ನಾಯಕರು. ಸಿಎಂ ಸ್ಥಾನದ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ನಮ್ಮ ಪಕ್ಷದವರಲ್ಲ. ನಾನು ಪ್ರತಿಜ್ಞೆ ಸ್ವೀಕಾರ ಮಾಡುವಾಗ ಸ್ಪಷ್ಟವಾಗಿ ಹೇಳಿದ್ದೆ, ವ್ಯಕ್ತಿ ಪೂಜೆಗೆ ಅವಕಾಶವಿಲ್ಲ, ಪಕ್ಷ ಪೂಜೆಗೆ ಮಾತ್ರ ಅವಕಾಶ ಎಂದು. ಆ ಮಾತಿಗೆ ನಾನು ಈಗಲೂ ಬದ್ಧನಾಗಿದ್ದೇನೆ.
ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗುಂಪಿಲ್ಲ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನೇ ಹೊರತು, ಯಾವುದೇ ಗುಂಪಿನ ನಾಯಕನಲ್ಲ ಎಂದು ಡಿಕೆಶಿ ತಿಳಿಸಿದರು.
ನಮ್ಮ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ನನ್ನದು ಯಾವ ಗುಂಪು ಇಲ್ಲ, ಬೇರೆಯವರ ಗುಂಪೂ ಇಲ್ಲ. ಇರುವುದು ಒಂದೇ ಗುಂಪು. ಅದು ಕಾಂಗ್ರೆಸ್. ಎಲ್ಲರೂ ಇದೇ ಹಾದಿಯಲ್ಲಿ ಸಾಗುತ್ತಾರೆ. ನನ್ನ ಹೆಸರನ್ನು ಯಾರೂ ಹೇಳಬಾರದು. ಕೊರೊನಾ ಸಮಯದಲ್ಲಿ ಜನರನ್ನು ಉಳಿಸೋಣ. ಆರ್ಥಿಕ ಸಂಕಟಕ್ಕೆ ಪರಿಹಾರ ಕೊಡಲು ಶ್ರಮಿಸೋಣ ಎಂದು ಡಿಕೆಶಿ ಹೇಳಿದರು.
ನಾನು ಕೆಪಿಸಿಸಿ ಅಧ್ಯಕ್ಷನಾಗಿ ಪ್ರತಿಜ್ಞೆ ಸ್ವೀಕರಿಸಿದ ನಂತರ ಪಕ್ಷದ ದಿಲ್ಲಿ ನಾಯಕರನ್ನು ಅಧಿಕೃತವಾಗಿ ಭೇಟಿ ಮಾಡಿರಲಿಲ್ಲ. ಹೀಗಾಗಿ ಬಂದಿದ್ದೇನೆ ಎಂದು ಡಿಕೆಶಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರದೇಶ ಕಾಂಗ್ರೆಸ್ ಪದಾಧಿಕಾರಿಗಳ ಬದಲಾವಣೆ ಮಾಡಬೇಕಿದೆ. ಅದರ ಮಾರ್ಗಸೂಚಿ ಬಗ್ಗೆ ಪಕ್ಷದ ನಾಯಕರ ಜತೆ ಮಾತನಾಡಲು ಬಂದಿದ್ದೇನೆಂದರು.
ಮೈಸೂರು ಮೇಯರ್ ವಿಚಾರ
ಮೈಸೂರು ಮೇಯರ್ ವಿಚಾರದ ಜವಾಬ್ದಾರಿಯನ್ನು ಕಾರ್ಯಾಧ್ಯಕ್ಷರಾದ ಧೃವನಾರಾಯಣ್ ಹಾಗೂ ಸ್ಫಳೀಯ ಅಧ್ಯಕ್ಷರಿಗೆ ನೀಡಿದ್ದೇನೆ. ಸ್ಥಳೀಯ ಪರಿಸ್ಥಿತಿ ಅವಲೋಕಿಸಿ ತೀರ್ಮಾನಿಸಲು ಹೇಳಿದ್ದೇನೆಂದರು.