ಬೆಂಗಳೂರು: ಯೋಗ ಶಿಕ್ಷಣವನ್ನು ರಾಜ್ಯದ ಪಠ್ಯಕ್ರಮದಲ್ಲಿ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಮನುಕುಲದ ಮಾನಸಿಕ-ದೈಹಿಕ ಸದೃಢತೆಗಾಗಿ ಹಿರಿಯರು ಕೊಟ್ಟು ಹೋಗಿರುವ ಯೋಗಕ್ಕೆ ಈಗ ವಿಶ್ವ ಮನ್ನಣೆ ದೊರೆತಿದೆ. ಮಕ್ಕಳ ಏಕಾಗ್ರತೆ ಮತ್ತು ಬೆಳವಣಿಗೆಗೆ ಇದು ಅತಿ ಹೆಚ್ಚು ಪರಿಣಾಮಕಾರಿ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.
ಈ ವರ್ಷದಿಂದಲೇ ಜಾರಿಗೆ ಬರುತ್ತಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಯೋಗವನ್ನು ಪಠ್ಯವನ್ನಾಗಿ ಅಳವಡಿಸುವ ಅಂಶವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕ್ರಮ ವಹಿಸಿದೆ. ಮಕ್ಕಳು ಆರಂಭದಿಂದಲೇ ಶೈಕ್ಷಣಿಕವಾಗಿ ಬೆಳವಣಿಗೆ ಸಾಧಿಸುವುದರ ಜತೆಗೆ, ಯೋಗದ ಮೂಲಕ ದೈಹಿಕ-ಮಾನಸಿಕವಾಗಿ ಸದೃಢರಾಗಲಿದ್ದಾರೆ ಎಂದು ಡಿಸಿಎಂ ಹೇಳಿದರು.
ವಚನಾನಂದ ಶ್ರೀಗಳಿಂದ ಯೋಗ
ಹರಿಹರದ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಯೋಗ ಪಟುಗಳಿಂದ ಕಟ್ಟಿ ಚಕ್ರಾಸನ, ತ್ರಿಕೋನಾಸನ, ಊರ್ಧ್ವ ತಾಡಾಸನ, ಪಾದ ಹಸ್ತಾಸನ, ಉಸ್ಟ್ರಾಸನ, ಶಶಾಂಕಾಸನ, ಮಂಡೂಕಾಸನ, ಮಕರಾಸನ, ಭುಜಂಗಾಸನ, ಬಾಲ ಕ್ರೀಡಾಸನ, ಶಲ್ಬಾಸನ, ಉತ್ಥಾನ ಪಾದಾಸನ, ಅರ್ಧಪವನ ಮುಕ್ತಾಸನ, ಪವನ ಮುಕ್ತಾಸನ ಜತೆಗೆ, ಕಪಾಲಬಾತಿ, ಪ್ರಾಣಯಾಮ, ನಾಡಿ ಶೋಧನ, ಶೀಥಲಿ ಪ್ರಾಣಯಾಮ, ಭ್ರಾಮರಿ ಪ್ರಾಣಯಾಮ ವನ್ನು ಮಾಡಿಸಿದರು.
ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ ಅವರು ಯೋಗ ದಿನಾಚರಣೆಗೆ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕ್ರೀಡಾ ಮತ್ತು ಯವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಪ್ರಭಾಕರ್, ಯುವಜನ ಸೇವೆ ಇಲಾಖೆ ಆಯುಕ್ತ ಗೋಪಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಉನ್ನತ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್ ಸಹಯೋಗದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಗಿತ್ತು.

