ಜು. 19-22 ರಂದು ಎಸ್.ಎಸ್.ಎಲ್.ಸಿ ಪರೀಕ್ಷೆ; ಜು. 2ನೇ ವಾರ 2ನೇ ಪಿಯು ಪರೀಕ್ಷಾ ಫಲಿತಾಂಶ -ಸಚಿವ ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಎಸ್ಎಸ್ ಎಲ್.ಸಿ ಪರೀಕ್ಷಾ ದಿನಾಂಕವನ್ನು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಪ್ರಕಟಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಸಚಿವರು ಈ ಕುರಿತು ಮಾಹಿತಿ ನೀಡಿದರು.

ಇದೇ ಜು. 19ರಂದು ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಜು. 22ರಂದು ಭಾಷಾ ವಿಷಯಗಳ ಪರೀಕ್ಷೆ ನಡೆಸಲಾಗುವುದೆಂದರು.

8.76 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 7306 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರೀಕ್ಷೆಗೆ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದವರು ಹೇಳಿದರು.

ಸಮಾಜವಿಜ್ಞಾನ, ವಿಜ್ಞಾನ ಹಾಗೂ ಗಣಿತದ ಒಂದು ಪತ್ರಿಕೆ ಹಾಗೂ ಕನ್ನಡ ಹಿಂದಿ ಇಂಗ್ಲೀಷ್ ಸೇರಿ ಒಂದು ಪರೀಕ್ಷೆ ನಡೆಯಲಿದೆ ಎಂದವರು ತಿಳಿಸಿದರು.

ಬೇರೆ ಊರುಗಳಿಗೆ ಹೋಗಿರುವ ವಿದ್ಯಾರ್ಥಿಗಳು ತಮ್ಮ ಸಮೀಪದ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು, 10 ಸಾವಿರ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ. ಜೂ. 30ರಂದು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಶಾಲೆಗಳಿಗೆ ಕಳುಹಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.

ಕೊರೊನಾ ಸೋಂಕಿಗೊಳಾಗಿರುವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬಯಸಿದರೆ ಪ್ರತ್ಯೇಕ ಕೊಠಡಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು.

2ನೇ ಪಿಯು ಫಲಿತಾಂಶ
ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಜುಲೈ ಎರಡನೇ ವಾರದಲ್ಲಿ ಪ್ರಕಟವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಈ ಸಂದಬದಲ್ಲಿ ತಿಳಿಸಿದರು.

ರಾಜ್ಯದಲ್ಲಿ ಶಾಲೆಗಳ ಆರಂಭದ ಬಗ್ಗೆ ಚರ್ಚೆಯಾಗಿದೆ. ಗ್ರಾಮೀಣ ಭಾಗದ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ. ಜುಲೈ 1 ರಿಂದ ಚಂದನ ವಾಹಿನಿ ಮೂಲಕ ಎಲ್ಲ ತರಗತಿಗಳಿಗೆ ಪಾಠ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 8,9,10 ನೇ ತರಗತಿಗಳ ಪಾಠ ಆರಂಭಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲು ಸುಗ್ರೀವಾಜ್ಞೆ ತರಲಾಗಿದೆ. ಜೂ. 30ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದ ಅವರು, ಶಿಕ್ಷಕಮಿತ್ರ ಆಪ್ ಮೂಲಕ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ವರ್ಗಾವಣೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದರು.