ಬೆಂಗಳೂರು: ಕೋವಿಡ್ ನಿಯಂತ್ರಣಕ್ಕೆ ಕೇಂದ್ರದ ಬಿಜೆಪಿ ಸರಕಾರವು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಮರೋಪಾದಿ ಕಾರ್ಯ ನಿರ್ವಹಿಸಿತು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ರಾಜ್ಯ ಮಟ್ಟದ ಇ ಚಿಂತನಾ ಸಭೆಯಲ್ಲಿ ಅವರು ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರಕಾರ ಕೈಗೊಂಡ ಕ್ರಮಗಳು ಕುರಿತು ಸೋಮವಾರ ಮಾತನಾಡಿದರು.
ವಿಶ್ವದಲ್ಲೇ ಗರಿಷ್ಠ ಕೋವಿಡ್ ಲಸಿಕೆ ನೀಡಿದ ದೇಶವಾಗಿ ಭಾರತ ಹೊರಹೊಮ್ಮಿದೆ. ದೇಶದಾದ್ಯಂತ ಒಟ್ಟು 32.66 ಕೋಟಿ ಜನರಿಗೆ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ ಎಂದರು.
ಲಸಿಕೆ ಆಂದೋಲನದಲ್ಲಿ ಭಾರತವು ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಹೇಳಿದರು.
ಹಿಂದೆ ದೇಶದಲ್ಲಿ ಏಳು ರೆಮಿಡಿಸಿವಿರ್ ಉತ್ಪಾದನಾ ಘಟಕಗಳಿದ್ದವು. ನರೇಂದ್ರ ಮೋದಿ ಅವರ ವಿಶೇಷ ಮುತುವರ್ಜಿಯ ಕಾರಣ ಈಗ ರೆಮಿಡಿಸಿವಿರ್ ಉತ್ಪಾದನಾ ಘಟಕಗಳ ಸಂಖ್ಯೆ 17ಕ್ಕೆ ಏರಿದೆ ಎಂದು ತಿಳಿಸಿದರು.
ಆಮ್ಲಜನಕ ಉತ್ಪಾದನಾ ಘಟಕಗಳ ಹೆಚ್ಚಳಕ್ಕೂ ಆದ್ಯತೆ ಕೊಡಲಾಗಿದ್ದು, ದೇಶದಲ್ಲಿ ಈ ಹಿಂದೆ 100 ಆಮ್ಲಜನಕ ಉತ್ಪಾದನಾ ಘಟಕಗಳಿದ್ದು, ಈಗ 2,200 ಹೊಸ ಘಟಕಗಳು ಕಾರ್ಯ ಪ್ರವೃತ್ತವಾಗುತ್ತಿವೆ ಎಂದರು.
ಕೋವಿಡ್ 2ನೇ ಅಲೆಯನ್ನು ನಿಭಾಯಿಸಲಾಗದೆ ಹಲವು ದೇಶಗಳು ಕೈಚೆಲ್ಲುವ ಪರಿಸ್ಥಿತಿ ಬಂದಿತ್ತು. ಆದರೆ, ಭಾರತ ಸವಾಲಾಗಿ ತೆಗೆದುಕೊಂಡು, ಮೋದಿ ಅವರ ನೇತೃತ್ವದಲ್ಲಿ ಸಮರ್ಥವಾಗಿ ನಿಭಾಯಿಸಲಾಗಿದೆ ಎಂದು ಡಿವಿಎಸ್ ಹೇಳಿದರು.
ವಿರೋಧ ಪಕ್ಷಗಳು ಮಾಡುವ ಅಪಪ್ರಚಾರಕ್ಕೆ ತಮ್ಮ ಕಾರ್ಯದ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಸ್ಪಷ್ಟ ಉತ್ತರ ನೀಡಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಗೆ ನೆರವಾಗುವ ದೃಷ್ಟಿಯಿಂದ ಫ್ರಂಟ್ಲೈನ್ ವಾರಿಯರ್ಗಳಾಗಿ ಬಿಜೆಪಿ ಕಾರ್ಯಕರ್ತರನ್ನು ತರಬೇತಿಗೊಳಿಸಲಾಗುತ್ತಿದೆ. ಕರ್ನಾಟಕದಿಂದ 1.20 ಲಕ್ಷ ಕಾರ್ಯಕರ್ತರನ್ನು ಸಿದ್ಧಪಡಿಸಲಾಗುವುದು ಎಂದರು.

