ತೃತೀಯ ಲಿಂಗಿಗಳಗಳನ್ನು ಗೌರವಿಸೋಣ, ಅವರ ಸ್ವಾಭಿಮಾನದ ಬದುಕಿಗೆ ಕೈಜೋಡಿಸೋಣ -ಡಿ.ಕೆ. ಶಿವಕುಮಾರ್

ಬೆಂಗಳೂರು: ಭೂಮಿಯ ಮೇಲೆ ಹುಟ್ಟಿದ ಎಲ್ಲ ಜೀವಿಗೂ ತಮ್ಮದೇ ಆದ ಗೌರವವಿದೆ. ಹೀಗಿರುವಾಗ ಗಂಡು, ಹೆಣ್ಣು, ತೃತೀಯ ಲಿಂಗಿಗಳು ಎಂಬ ತಾರತಮ್ಯ ಸರಿಯಲ್ಲ. ಎಲ್ಲರನ್ನೂ ಸಮಾನವಾಗಿ ಗೌರವಿಸಬೇಕು. ತೃತೀಯ ಲಿಂಗಿಗಳ ಸ್ವಾಭಿಮಾನದ ಬದುಕಿಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೆಸರಾಂತ ಹೋರಾಟಗಾರ್ತಿ ಡಾ. ಅಕ್ಕಯ್ ಪದ್ಮಶಾಲಿ ಅವರ ಆತ್ಮಕತೆ ಕರುಣೆಗೊಂದು ಸವಾಲು ಪುಸ್ತಕವನ್ನು ಬೆಂಗಳೂರಿನಲ್ಲಿ ಸೋಮವಾರ ಬಿಡುಗಡೆ ಮಾಡಿ, ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಅಕ್ಕಯ್ ಪದ್ಮಶಾಲಿ ಅವರು ಆತ್ಮಕಥನದಲ್ಲಿ ಕುಟುಂಬ, ಹೊರಗಿನ ಸಮಾಜ ತಮ್ಮನ್ನು ಯಾವ ರೀತಿ ನೋಡುತ್ತಿತ್ತು, ತಮಗಾದ ಗಾಯಗಳು, ಅನುಭವಿಸಿದ ಯಾತನೆಗಳನ್ನು ವಿವರಿಸಿದ್ದಾರೆಂದರು.

ಯಾರೇ ಆಗಲಿ ನೋವು ಅನುಭವಿಸದೇ ಸಾಧನೆ ಮಾಡಲಾಗುವುದಿಲ್ಲ. ಕಲ್ಲು ಪ್ರಕೃತಿ, ಕೆತ್ತಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ ಎಂದು ನಾನು ಅಧಿಕಾರ ಸ್ವೀಕರಿಸುವಾಗ ಹೇಳಿದ್ದೆ. ಅದೇ ರೀತಿ ಅಕ್ಕಯ್ ಪದ್ಮಶಾಲಿ ಅವರು ಕೂಡ ಅನೇಕ ಪೆಟ್ಟುಗಳನ್ನು ತಿಂದು ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ ಎಂದು ತಿಳಿಸಿದರು.

ಒಂದು ರಾಜಕೀಯ ಪಕ್ಷದ ಅಧ್ಯಕ್ಷನಾಗಿ ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಮೊದಲು ಮನುಷ್ಯತ್ವ. ಆಮೇಲೆ ಗಂಡು, ಹೆಣ್ಣು, ಬೇರೆ, ಬೇರೆ ವಿಚಾರ ಬರುತ್ತವೆ. ಪ್ರತಿಯೊಬ್ಬರೂ ಒಂದೊಂದು ಜೀವ. ಆ ಜೀವಕ್ಕೆ ನಾವು ಏನು ಗೌರವ ಕೊಡಬೇಕೋ ಅದನ್ನು ಕೊಡಬೇಕು. ನಮ್ಮ ಧರ್ಮದಲ್ಲಿ ಇಲಿಯನ್ನು ಗಣೇಶನ ವಾಹನ, ಕಾಗೆಯನ್ನು ಶನೇಶ್ವರನ ವಾಹನ, ನವಿಲು ಸುಬ್ರಹ್ಮಣ್ಯನ ವಾಹನ ಎಂದು ಪೂಜನೀಯ ಸ್ಥಾನ ನೀಡುತ್ತಾ ಬಂದಿದ್ದೇವೆ ಎಂದರು.

ನಮ್ಮ ಊರುಗಳಲ್ಲಿ ಈ ಹಿಂದೆ ದೇವರಿಗೆ ಕೋಣಗಳನ್ನು ಬಲಿ ಕೊಡುತ್ತಿದ್ದರು. ಈಗ ಕುರಿ, ಕೋಳಿ ಕೊಡುತ್ತಾರೆ. ಸಂಸ್ಕೃತದಲ್ಲಿ ಒಂದು ಶ್ಲೋಕ ಇದೆ. ಅದರರ್ಥ, ಈ ದೇವರಲ್ಲೂ ಬಹಳ ತಾರತಮ್ಯ ಇದೆ. ದೇವರು ಬಲಿ ತೆಗೆದುಕೊಳ್ಳುವಾಗ ಹುಲಿ, ಆನೆ, ಸಿಂಹವನ್ನು ಬಲಿ ಪಡೆಯುವುದಿಲ್ಲ. ಕುರಿ, ಮೇಕೆ ಅಥವಾ ಕೋಣವನ್ನು ಮಾತ್ರ ಬಲಿ ತೆಗೆದುಕೊಳ್ಳುತ್ತದೆ. ಬಲಿಷ್ಠವಾಗಿರುವುದನ್ನು ಮುಟ್ಟುವುದಿಲ್ಲ. ಅದೇ ರೀತಿ ಈ ಸಮಾಜದಲ್ಲಿ ನೀವು ಬಲಿ ಆಗಿದ್ದೀರಿ ಎಂದು ತಿಳಿಸಿದರು.

ಈ ಹೊಸ ಯುಗದಲ್ಲಿ ಇದನ್ನು ಹೇಗೆ ತಪ್ಪಿಸಬೇಕು? ಈ ವರ್ಗದವರಿಗೆ ಆರ್ಥಿಕ, ಸಾಮಾಜಿಕ, ಮಾನಸಿಕ ಶಕ್ತಿಯನ್ನು ಹೇಗೆ ತುಂಬಬೇಕು ಎಂಬುದರ ಬಗ್ಗೆ ಚಿಂತನೆ ಮಾಡೋಣ. ನೀವೂ ನಾಯಕರಾಗಿ ಬೆಳೆಯಬೇಕು, ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ನಿಮ್ಮ ಧ್ವನಿ ಇರಬೇಕು. ಆ ಬಗ್ಗೆ ಸೂಕ್ತ ವೇದಿಕೆಯಲ್ಲಿ ಮಾತನಾಡುತ್ತೇನೆ ಎಂದು ಡಿಕೆಶಿವಕುಮಾರ್ ಹೇಳಿದರು.

ಈ ಸಮಾಜದವರು ತಮ್ಮ ಕಾಲ ಮೇಲೆ ನಿಂತು ಹೇಗೆ ಜೀವನ ನಡೆಸಬಹುದು ಎಂಬುದರ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಲು ನೀವು ಶಕ್ತಿ ತುಂಬಬೇಕು. ಅವರನ್ನು ರಸ್ತೆಯಲ್ಲಿ ಭಿಕ್ಷೆ ಬೇಡಲು ನಿಲ್ಲಿಸಬಾರದು. ಅವರನ್ನು ಕಂಡರೆ ಸಮಾಜ ಗೌರವ ನೀಡುವಂತಾಗಬೇಕು. ಆ ಬಗ್ಗೆ ನೀವು ಚಿಂತನೆ ಮಾಡಬೇಕು. ಮುಂದೆ ನಾವೆಲ್ಲ ಸೇರಿ ಒಟ್ಟಾಗಿ ಕೆಲಸ ಮಾಡೋಣ ಎಂದು ಡಿಕೆಶಿ ತಿಳಿಸಿದರು.

ಖ್ಯಾತ ರಂಗಕರ್ಮಿ ಪ್ರಸನ್ನ, ಸಾಮಾಜಿಕ ಹೋರಾಟಗಾರ್ತಿ ರೂತ್ ಮನೋರಮಾ, ಅಕ್ಕಯ್ ಪದ್ಮಶಾಲಿ, ಲೇಖಕ ಡಾ. ಡೊಮಿನಿಕ್, ಹಿರಿಯ ಪತ್ರಕರ್ತ, ಪ್ರಕಾಶಕ ಜಿ.ಎನ್. ಮೋಹನ್, ಶಾಸಕಿ ಸೌಮ್ಯಾರೆಡ್ಡಿ, ಶಾಸಕ ಎ. ಮಂಜು, ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ಉಪಸ್ಥಿತರಿದ್ದರು.