ಕೊರೊನಾ ಸಮಸ್ಯೆ ಲೆಕ್ಕಿಸದೆ ಎಸ್.ಎಸ್.ಎಲ್. ಸಿ. ಪರೀಕ್ಷೆ ನಡೆಸುವುದು ಸರಿಯಲ್ಲ -ಹೆಚ್.ವಿಶ್ವನಾಥ್

ಮೈಸೂರು: ಕೊರೊನಾ ಹೊಸ ಸಮಸ್ಯೆ ಲೆಕ್ಕಿಸದೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಮೈಸೂರಲ್ಲಿ ಮಂಗಳವಾರ ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಇಡೀ ಜಗತ್ತೆ ಕೊರೊನಾ ಸವಾಲನ್ನು ಎದುರಿಸುತ್ತಿದೆ. ಇಂತಹ ಸಂಧರ್ಭದಲ್ಲಿ ಪರೀಕ್ಷೆ ಮಾಡುವುದು ಅವೈಜ್ಞಾನಿಕ ಎಂದು ಅವರು ಹೇಳಿದರು.

ಮುಖ್ಯಮಂತ್ರಿಗಳು ನಾನು ಹೇಳಿದ್ದೆ ಸರಿ, ನಾನು ಮಾಡಿದ್ದೇ ಸರಿ ಎಂಬ ಲೆಕ್ಕಾಚಾರದಲ್ಲಿದ್ದಾರೆ. ಸರ್ಕಾರ ಹಾಗೂ ಸಚಿವರು ಇಗೋ ಬಿಟ್ಟು ಕೆಲಸ ಮಾಡಬೇಕಿದೆ ಎಂದ ಅವರು 10-15 ದಿನದಲ್ಲಿ ಮೂರನೇ ಅಲೆ ಪ್ರಾರಂಭವಾಗುತ್ತೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಪರೀಕ್ಷೆ ಮಾಡಲು ಮುಂದಾಗಿದ್ದಾರೆ. ಹಿಂದೆ ಶಿಕ್ಷಣ ಇಲಾಖೆಯಲ್ಲಿ ಸಚಿವರಾಗಿ ಕೆಲಸ ಮಾಡಿದವರ ಸಲಹೆ ಪಡೆದಿಲ್ಲ. ಏಕಾ ಏಕಿ ನಿರ್ಧಾರ ತೆಗೆದುಕೊಂಡು ಮಕ್ಕಳನ್ನು ಸಾವಿನ ಕೂಪಕ್ಕೆ ತಳ್ಳಲಾಗುತ್ತಿದೆ ಎಂದು ವಿಶ್ವನಾಥ್ ಹೇಳಿದರು.

ಕೇಂದ್ರ ಸರ್ಕಾರವೇ ಸಿಬಿಎಸ್ಸಿ ಎಕ್ಸಾಂ ಬೇಡ ಎಂದಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಈ ವಿಷಯದಲ್ಲಿ ಹಠಕ್ಕೆ ಬಿದ್ದಿದೆ ಎಂದರು.

ಪ್ರಧಾನಿ ಮೋದಿಯೇ ಹೇಳಿದ್ದಾರೆ ಜೀವನಕ್ಕಿಂತ ಜೀವ ಮುಖ್ಯ ಅಂತ. ನೀವ್ಯಾಕೆ ಮಕ್ಕಳ ಜೀವ ತೆಗೆಯಲು ಮುಂದಾಗಿದ್ದೀರಾ ಎಂದು ರಾಜ್ಯ ಸರ್ಕಾರ ಶಿಕ್ಷಣ ಸಚಿವರನ್ನು ವಿಶ್ವನಾತ್ ಪ್ರಶ್ನಿಸಿದರು.

ಕೆಲವು ತಜ್ಞರು ಸರ್ಕಾರದ ಮರ್ಜಿನಲ್ಲಿದ್ದಾರೆ. ಡಾ.ದೇವಿಶೆಟ್ಟಿಯವರೆ ಮೂರನೇ ಅಲೆ ಬರುತ್ತೆ ಅಂತಾರೆ. ಆದರೆ ಪರೀಕ್ಷೆ ಮಾಡಬಹುದು ಅಂತಾರೆ. ದೇವಿಶೆಟ್ಟಿಯವರು ಎರಡೂ ಹೇಳಿಕೆಯನ್ನು ಕೊಡುತ್ತಿದ್ದಾರೆ. ಯಾಕಾಗಿ ಈ ರೀತಿ ಹೇಳುತ್ತಿದ್ದಾರೆ ಗೊತ್ತಿಲ್ಲ. ಜೀವವನ್ನು ರಕ್ಷಿಸುವ ಕೆಲಸವಾಗಬೇಕು. ಸುಧಾಕರ್ ಅವರಿಗೆ ಪರೀಕ್ಷೆ ವಿಚಾರ ಗೊತ್ತಿಲ್ಲ ಅಂತಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ ಎಂದರು.

ಕಾಸರಗೋಡು ಭಾಗದಲ್ಲಿ ಕನ್ನಡ ನಾಮಫಲಕ ತೆರವು ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಸರಗೋಡು ಜಿಲ್ಲೆ ನಮ್ಮದೇ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಪತ್ರ ಬರೆದು ಸುಮ್ಮನಾಗುವುದಲ್ಲ ಎಂದರು.