ಮೈಸೂರು: ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಮುಗಿದ ಅಧ್ಯಾಯ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ವಿಜಯೇಂದ್ರ ಅವರು ಬುಧವಾರ ಮೈಸೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಮುಂದಿನ ಎರಡು ವರ್ಷ ಬಿಎಸ್ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ವಿಜಯೇಂದ್ರ ಹೇಳಿದರು.
ಯಡಿಯೂರಪ್ಪನವರೇ ಮುಂದಿನ ಎರಡು ವರ್ಷ ಸಿಎಂ ಆಗಿರುತ್ತಾರೆ. ಇದನ್ನ ರಾಷ್ಟ್ರೀಯ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಅನಗತ್ಯ ಎಂದು ತಿಳಿಸಿದರು.
ಹಲವು ಮುಖಂಡರು ದೆಹಲಿಗೆ ಭೇಟಿ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಬಿವೈ ವಿಜಯೇಂದ್ರ, ಯಾರಾದರೂ ದೆಹಲಿಗೆ ಹೋಗಿದ್ದರೆ ಅದು ಅವರ ವೈಯಕ್ತಿಕ ವಿಚಾರ. ದೆಹಲಿ ಭೇಟಿ ಬಗ್ಗೆ ರಾಜಕೀಯ ಬಣ್ಣ ಹಚ್ಚುವುದು ಬೇಡ ಎಂದು ವಿಜಯೇಂದ್ರ ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿ ಅವರು, ನಾನು ಚುನಾವಣೆಗೆ ನಿಲ್ಲಬೇಕೋ ಬೇಡ್ವೋ.? ನಿಲ್ಲುವುದಾದರೆ ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂಬುದು ಎರಡು ವರ್ಷದ ನಂತರ ತೀರ್ಮಾನವಾಗುತ್ತೆ. ನಾನು ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ನಾನು ಈಗ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.
ಕಾಂಗ್ರೆಸ್ ಗೆ ಬಿಜೆಪಿ ಟೀಕಿಸುವ ನೈತಿಕತೆ ಉಳಿದಿಲ್ಲ
ಕಾಂಗ್ರೆಸ್ ಗೆ ಬಿಜೆಪಿ ಆಡಳಿತ ಟೀಕಿಸುವ ನೈತಿಕತೆಯೆ ಉಳಿದಿಲ್ಲ ಎಂದ ಅವರು ಕೊರೊನಾ ಸಂಕಷ್ಟ ಕಾಲದಲ್ಲಿ ಜನರ ನೋವಿಗೆ ಸ್ಪಂದಿಸುವುದನ್ನು ಮರೆತು ಹಾದಿ ಬೀದಿಯಲ್ಲಿ ನಿಂತು ಸಿಎಂ ಅಭ್ಯರ್ಥಿ ಬಗ್ಗೆ ಮಾತಾಡುತ್ತಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಎಲ್ಲಾ ವಿಚಾರದಲ್ಲೂ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನವರು ಬಿಜೆಪಿ ಬಗ್ಗೆ ಟೀಕಿಸುವುದು ಹಾಸ್ಯಸ್ಪದ ಎಂದರು.

