ಬ್ಯಾಗುಗಳಲ್ಲಿ ಮರಳು ತುಂಬಿ ಕೆಜಿ ಲೆಕ್ಕದಲ್ಲಿ ಸರಕಾರದಿಂದ ಮರಳು ಮಾರಾಟ -ಸಚಿವ ನಿರಾಣಿ

ಬೆಂಗಳೂರು: ದೇಶದಲ್ಲೇ ಪ್ರಥಮ ಬಾರಿಗೆ ಗ್ರಾಹಕರಿಗೆ ಅನುಕೂಲವಾಗಲು ಇನ್ನು ಮುಂದೆ ಬ್ಯಾಗುಗಳಲ್ಲಿ ಮರಳು ಮಾರಾಟವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಾಡಲಿದೆ.

ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಬುಧವಾರ ಕಲ್ಲು ಗಣಿಗಾರಿಕೆ ಮರಳು ಕುರಿತು ಜಿಲ್ಲಾಧಿಕಾರಿಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸೇರಿ ಮತ್ತಿತರೆ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿ, ನಂತರ ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಬ್ಯಾಗುಗಳಲ್ಲಿ ಮಾರಾಟ ಮಾಡುವ ಉದ್ದೇಶವೇನೆಂದರೆ, ಸರಕಾರದ ವತಿಯಿಂದಲೇ ಕೈಗೆಟುಕವ ದರದಲ್ಲಿ ಜನಸಾಮಾನ್ಯರು ಹಾಗೂ ಎಲ್ಲಾ ವರ್ಗದವರಿಗೂ ಮರಳು ಸಿಗಲಿದ್ದು ಇದರ ಪ್ರಸ್ತಾವನೆ ಸಹಾ ಸಿದ್ದವಾಗಿದೆ. ಇದರಿಂದಾಗಿ ಮನೆ ಕಟ್ಟುವವರು ಹಾಗೂ ಇತರರಿಗೆ ಸುಲಭ ಮಾರ್ಗದಲ್ಲಿ ಮರಳು ಲಭ್ಯವಾಗಲಿದೆ ಎಂದರು.

ರಾಜ್ಯ ಸರಕಾರ ಮದ್ಯವನ್ನು ಯಾವ ರೀತಿ ಕರ್ನಾಟಕ ರಾಜ್ಯ ಪಾನೀಯ ನಿಗಮದ ಮೂಲಕ ಮಾರಾಟ ಮಾಡುತ್ತಿದೆಯೋ ಅದೇ ಮಾದರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ತನ್ನದೇ ಆದ ಸಂಸ್ಥೆಯ ಮೂಲಕ ಬ್ಯಾಗುಗಳಲ್ಲಿ ಮರಳು ತುಂಬಿಸಿ ಮಾರಾಟ ಮಾಡಲು ಉದ್ದೇಶಿಸಿದೆ ಎಂದು ಹೇಳಿದರು.

ಮರಳು ಸಾಗಾಣಿಕೆ ಮಾಡುವ ವೇಳೆ ಕನಿಷ್ಠ ಶೇ. 25ರಿಂದ 30ರಷ್ಟು ಮರಳು ಅನುಪಯುಕ್ತವಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ 50 ಕೆಜಿಯ ಬ್ಯಾಗ್, 1 ಟನ್ ಹಾಗೂ ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರು ಮರಳನ್ನು ಖರೀದಿಸಬಹುದು ಎಂದು ಸಚಿವರು ತಿಳಿಸಿದರು.

ಪ್ರಾಯೋಗಿಕವಾಗಿ ರಾಜ್ಯದ ಐದು ಕಡೆ ಈ ಘಟಕಗಳನ್ನು ಪ್ರಾರಂಭ ಮಾಡಲಾಗುವುದು. ಮರಳು ಮಾರಾಟ ಮಾಡಲು ಬ್ಯಾಗ್ಗಳನ್ನು ಸಿದ್ಧಪಡಿಸುವುದು, ಸಾಗಾಣಿಕೆ ಸೇರಿದಂತೆ ಎಲ್ಲ ರೀತಿಯ ತರಬೇತಿಯನ್ನು ಸಂಬಂಧಪಟ್ಟವರಿಗೆ ನೀಡಲಿದ್ದೇವೆ ಎಂದು ಹೇಳಿದರು.

ಬ್ಯಾಗ್ ಮೂಲಕ ಮಾರಾಟ ಮಾಡುವಾಗ ಎ, ಬಿ ಮತ್ತು ಸಿ ಶ್ರೇಣಿ ಎಂದು ವರ್ಗೀಕರಣ ಮಾಡುತ್ತೇವೆ. ಮೊದಲು ಸ್ಟಾಕ್ ಯಾರ್ಡ್ಗಳಲ್ಲಿ ಪ್ರತ್ಯೇಕಗೊಳಿಸಿ ನಂತರ ಅದನ್ನು ಕೈಗೆಟಕುವ ದರದಲ್ಲಿ ವಿತರಣೆ ಮಾಡಲಿದ್ದೇವೆ ಎಂದರು.

ಮರಳುಗಾರಿಕೆಯನ್ನು ಕೇವಲ ಆರು ತಿಂಗಳು ಮಾತ್ರ ನಡೆಸಬಹುದು. ನದಿಗಳಲ್ಲಿ ನೀರು ಸಂಗ್ರಹಣೆಯಾದರೆ ಮರಳು ತೆಗೆಯಲು ಅವಕಾಶವಿರುವುದಿಲ್ಲ. ಬ್ಯಾಗ್ಗಳಲ್ಲಿ ಮರಳು ಸಂಗ್ರಹಿಸಿಟ್ಟುಕೊಂಡರೆ, ವರ್ಷ ಪೂರ್ತಿ ಬಳಕೆ ಮಾಡಬಹುದು ಎಂದು ಸಲಹೆ ಮಾಡಿದರು.

ಬ್ಯಾಗುಗಳಲ್ಲಿ ಮರಳು ಸಂಗ್ರಹಣೆಯಾದರೆ ಸಾರ್ವಜನಿಕರಿಗೆ ಗುಣಮಟ್ಟದ ಮರಳು ಸಿಗಲಿದೆ. ತಮ್ಮ ವಾಹನಗಳಲ್ಲಿ ಎಲ್ಲಿಗೆ ಬೇಕಾದರೂ ಸುಲಭವಾಗಿ ಸಾಗಿಸಬಹುದು.ಇದರಿಂದ ಸಾಗಾಣಿಕೆ ವೆಚ್ಚವು ಕಡಿಮೆಯಾಗಲಿದೆ ಎಂದು ಸಚಿವ ನಿರಾಣಿ ಹೇಳಿದರು.