ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷಕ್ಕೆ ಭಯ; ಸಿಎಂ ಮೂಢನಂಬಿಕೆಗೆ ಅಂಟಿಕೊಂಡು ಕೂತಿದ್ದಾರೆ -ಸಿದ್ದರಾಮಯ್ಯ

ಮೈಸೂರು: ವಿರೋಧ ಪಕ್ಷಗಳನ್ನು ಎದುರಿಸಲು ಆಡಳಿತ ಪಕ್ಷಕ್ಕೆ ಭಯವಿದೆ. ಹಾಗಾಗಿಯೇ ಅಧಿವೇಶನ ಕರೆಯುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರಲ್ಲಿ ಗುರುವಾರ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಅಧಿವೇಶನ ಕರೆದರೆ ಸರ್ಕಾರದ ಬಣ್ಣ ಬದಲಾಗುತ್ತೆ ಎಂಬುದು ಅವರಿಗೆ ಗೊತ್ತಿದೆ. ಹಾಗಾಗಿ ಅಧಿವೇಶನ ಕರೆಯುತ್ತಿಲ್ಲ ಎಂದರು.

ತುರ್ತಾಗಿ ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ಕರೆಯಬೇಕು. ಇಂತಹ ತುರ್ತು ಪರಿಸ್ಥಿತಿಯಲ್ಲಿ ಅಧಿವೇಶನ ಕರೆಯದೆ ಇನ್ನು ಯಾವ ಸಂದರ್ಭದಲ್ಲಿ ಅಧಿವೇಶನ ಕರೆಯುತ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಮೇಲೆ ಅವರಿಗೆ ನಂಬಿಕೆ ಇದ್ದರೆ ಅಧಿವೇಶನ ಕರೆಯಬೇಕು. ನಾನು ಈಗಲು ಆಗ್ರಹ ಮಾಡುತ್ತೇನೆ. ತುರ್ತಾಗಿ ಮುಂಗಾರು ಅಧಿವೇಶನ ಕರೆಯಿರಿ ಎಂದು ಸಿದ್ದರಾಮಯ್ಯ ಹೇಳಿದರು.

ವಾಕ್ಸಿನ್ ವಿಚಾರದಲ್ಲಿ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ
ವಾಕ್ಸಿನ್ ವಿಚಾರದಲ್ಲಿ ಸುಧಾಕರ್ ಸುಳ್ಳು ಹೇಳುತ್ತಿದ್ದಾರೆ ಎಂದು ಸಿದರಾಮಯ್ಯ ದೂರಿದರು.

ವಾಕ್ಸಿನ್ ಸ್ಟಾಕ್ ಇದ್ದರೆ ಜನ ಯಾಕೆ ವಾಕ್ಸಿನ್ ಗಾಗಿ ಕ್ಯೂ ನಿಲ್ಲುತ್ತಿದ್ದರು. ವಾಕ್ಸಿನ್ ಗಾಗಿ ಜನರು ಪರದಾಡುತ್ತಿದ್ದಾರೆ. ಸರ್ಕಾರಕ್ಕೆ ವಾಕ್ಸಿನ್ ಪೂರೈಸಲು ಆಗುತ್ತಿಲ್ಲ. ವಾಕ್ಸಿನ್ ಹಂಚಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರ ವಿಫಲವಾಗಿವೆ ಎಂದರು.

ಮುಂದಿನ ಸಿಎಂ ಯಾರು ಎಂದು ಚರ್ಚೆ ನಡೆದಿಲ್ಲ
ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಯಾರು ಎಂಬುದು ಚರ್ಚೆಯೇ ನಡೆದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನನ್ನ ಡಿಕೆ ಶಿವಕುಮಾರ್ ನಡುವೆ ಯಾವುದೇ ಸಮನ್ವಯ ಸಮಿತಿ ರಚನೆ ಆಗುತ್ತಿಲ್ಲ ಎಂದ ಅವರು ಕಾಂಗ್ರೆಸ್ ನಲ್ಲಿ ಮೂಲ ವಲಸಿಗ ಎಂಬ ಪ್ರಶ್ನೆಯು ಇಲ್ಲ. ಮೊನ್ನೆ ಸಿಎಂ ಇಬ್ರಾಹಿಂ ಹೇಳಿದ್ದಾರೆ. ಸೊಸೆ ಮನೆಗೆ ಬರುವವರೆಗೂ ಹೊರಗಿನವಳು. ಬಂದ ಮೇಲೆ ಸೊಸೆ ಮನೆಯವಳೇ ಆಗುತ್ತಾಳೆ ಅಂತ. ಅದೇ ರೀತಿ ನಾನು ಹೊರಗಿನಿಂದ ಬಂದವನು. ಬಂದ ಮೇಲೆ ನಾನು 5 ವರ್ಷ ಮುಖ್ಯಮಂತ್ರಿ ಆಗಿದ್ದೇನೆ. ನಾನು ಮನೆಯವನೇ ಎಂದು ಸಿದ್ದರಾಮಯ್ಯ ಹೇಳಿದರು.

ಸಿಎಂ ಯಾರಾಗಬೇಕೆಂಬುದು ಚುನಾವಣೆ ಫಲಿತಾಂಶ ನಂತರ ಶಾಸಕರು, ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇನ್ನು ಚುನಾವಣೆ ಎರಡೂವರೆ ವರ್ಷ ಇದೆ. ಈಗಲೇ ಸಿಎಂ ಅಭ್ಯರ್ಥಿ ಬಗ್ಗೆ ಮಾತು ಇಲ್ಲ ಎಂದರು.

ನಮ್ಮ ಪಾತ್ರ ಇರುವುದಿಲ್ಲ
ಯೂತ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ವಿಚಾರಕ್ಕೂ ನಮಗೂ ಯಾವುದೇ ಸಂಬಂಧ ಇರೋದಿಲ್ಲ. ಅದೇ ಪ್ರತ್ಯೇಕವಾದ ವ್ಯವಸ್ಥೆ, ಆದರೂ ನಾನು ಸಲಹೆ ಕೊಟ್ಟಿದ್ದೆ. ಪ್ರತ್ಯೇಕ ಚುನಾವಣೆ ನಡೆದ ಮೇಲೆ ಅವರ ಆಯ್ಕೆ ಆಗಿದೆ. ಹೊಂದಾಣಿಕೆಯಿಂದ ಒಬ್ಬರನ್ನು ನೇಮಿಸಿ ಎಂದು ಹೇಳಿದ್ದೆ.
ಇದರಲ್ಲಿ ನನ್ನದಾಗಲಿ ಡಿಕೆಶಿಯವರದ್ದಾಗಲಿ ಪಾತ್ರ ಇರುವುದಿಲ್ಲ. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಿಎಂ ಮೂಢನಂಬಿಕೆಗೆ ಅಂಟಿಕೊಂಡು ಕೂತಿದ್ದಾರೆ
ಸಿಎಂ ಮೂಢನಂಬಿಕೆಗೆ ಅಂಟಿಕೊಂಡು ಕೂತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಚಾಮರಾಜನಗರಕ್ಕೆ ಮುಖ್ಯಮಂತ್ರಿ ಹೋಗಬೇಕು. ಅಷ್ಟು ದೊಡ್ಡ ದುರಂತ ನಡೆದರು ಅಲ್ಲಿಗೆ ಹೋಗದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ನಾನು ಅಧಿಕಾರದಲ್ಲಿದ್ದಾಗ 12 ಬಾರಿ ಚಾಮರಾಜನಗರಕ್ಕೆ ಹೋಗಿದ್ದೆ. ಅಲ್ಲಿಯ ಜನರ ಕಷ್ಟ ಕೇಳಲು ಸಿಎಂ ಭೇಟಿ ನೀಡಲಿ ಎಂದು ಸಿದ್ದರಾಮಯ್ಯ ಬಿಎಸ್ ವೈಗೆ ಸಲಹೆ ನೀಡಿದರು.