ಕೊರೊನಾ ಕಾಲಘಟದ ದೇವತಾ ಸ್ವರೂಪಿಗಳು

ಕೊರೊನಾ ವಿರುದ್ಧ ಜೀವ ಪಣಕ್ಕಿಟ್ಟ ವೈದ್ಯರನ್ನು ನೆನೆಯುತ್ತಾ
ವೈದ್ಯರ ದಿನಾಚರಣೆ ಸಂದರ್ಭದಲ್ಲಿ ವಿಶೇಷ ಲೇಖನ

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಕೊರೋನಾ ವೈರಸ್ ಕಾರಣದಿಂದ ಇಡೀ ವಿಶ್ವವೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ಎಲ್ಲರ ಪಾಲಿಗೂ ದೇವತಾ ಸ್ವರೂಪಿಗಳಾದವರು, ಕೊರೊನಾ ವಿರುದ್ಧ ಸಮರವನ್ನೇ ಸಾರಲು. ಹಲವು ತಿಂಗಳಿನಿಂದ ಇಲ್ಲಿಯವರೆಗೆ ವೈದ್ಯರು, ಆರೋಗ್ಯ ಸಹಾಯಕರು, ಟೆಕ್ನಿಶಿಯನ್ಸ್, ಆಶಾ ಕಾರ್ಯಕರ್ತರು, ಒಂದೇ ಒಂದು ದಿನವೂ ರಜೆ ಮಾಡದೇ ಸಾರ್ವಜನಿಕರ ಅಮೂಲ್ಯ ಜೀವನ ಉಳಿಸಿಕೊಳ್ಳುವುದಕ್ಕೆ ತಮ್ಮ ಜೀವನ ಮುಡಿಪಾಗಿಟ್ಟು ಶ್ರಮಿಸುತ್ತಿದ್ದಾರೆ.

ವೈದ್ಯ ಸಮೂಹವು ತಮ್ಮ ಹಿಂದಿರುವ ಕುಟುಂಬದ ಹಿತಾಸಕ್ತಿ ಕಡೆಗಣಿಸಿ, ತಮ್ಮ ಜೀವದ ಹಂಗು ತೊರೆದು, ಕೊರೊನಾ ರೋಗಿಗಳನ್ನು ಉಪಚರಿಸುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸವಾಗಿದೆ.

ಈ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಾವಿರಾರು ವೈದ್ಯರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ನಮ್ಮ ಆರೋಗ್ಯವನ್ನು ಉತ್ತಮ ಗೊಳಿಸಿ, ನಮ್ಮನ್ನು ಆರೈಕೆ ಮಾಡುವ ವೈದ್ಯರುಗಳೇ ದೈವ ಶಕ್ತಿಯನ್ನು ಪಡೆದುಕೊಂಡು, ಕಣ್ಣೆದುರಿಗೆ ನಿಲ್ಲುವ ದೇವರು ಎಂದು ಹೇಳಬಹುದು. ರಾಷ್ಟ್ರೀಯ ವೈದ್ಯರ ದಿನಾಚರಣೆಯಾದ ಇಂದು ವೈದ್ಯರಿಗೆ ಹಾಗೂ ವೈದ್ಯ ಸಮುದಾಯಕ್ಕೆ ಧನ್ಯವಾದವನ್ನು ಹೇಳುವ ಸುಸಂದರ್ಭದ ದಿನವಿಂದು ಎಂದೇ ಹೇಳಬಹುದು.

ರಾಷ್ಟ್ರೀಯ ವೈದ್ಯರ ದಿನದ ಇತಿಹಾಸ
ಹಿರಿಯ ವೈದ್ಯ ಮತ್ತು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಡಾ. ಬಿಧಾನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ವಾರ್ಷಿಕೋತ್ಸವವು ಒಂದೇ ದಿನದಲ್ಲಿ ನಡೆಯುತ್ತದೆ. ಅಂದರೆ ಜುಲೈ 1, 188 ರಂದು ಜನಿಸಿದರು ಮತ್ತು ಅದೇ ದಿನಾಂಕದಂದು 1962ರಲ್ಲಿ
ಈ ದಿನ ನಮ್ಮ ಜೀವನದಲ್ಲಿ ವೈದ್ಯರ ಮೌಲ್ಯವನ್ನು ಎತ್ತಿ ತೋರಿಸಲು ಮತ್ತು ಡಾ. ಬಿಧಾನ್ ಚಂದ್ರ ರಾಯ್ ಅವರಿಗೆ ಗೌರವ ಸಲ್ಲಿಸಲು 1991 ರಲ್ಲಿ ರಾಷ್ಟ್ರೀಯ ವೈದ್ಯರ ದಿನವನ್ನು ಕೇಂದ್ರ ಸರ್ಕಾರವು ಮಾನ್ಯತೆ ಮತ್ತು ಪ್ರತಿವರ್ಷ ಜುಲೈ 1 ರಂದು ಆಚರಿಸಲು ಸ್ಥಾಪಿಸಿತು.

ಡಾ.ಬಿಧನ್ ಚಂದ್ರ ರಾಯ್
ಡಾ. ಬಿಧನ್ ಚಂದ್ರ ರಾಯ್ ಅವರು ಅತ್ಯಂತ ಗೌರವಾನ್ವಿತ ವೈದ್ಯ ಮತ್ತು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದರು. 1948 ರಿಂದ 1962 ರ ತನಕ ಸುಮಾರು 14 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಅವರನ್ನು ಪಶ್ಚಿಮ ಬಂಗಾಳದ ಶ್ರೇಷ್ಠ ವಾಸ್ತುಶಿಲ್ಪಿ ಎಂದೂ ಪರಿಗಣಿಸಲಾಗುತ್ತದೆ.

ಪಶ್ಚಿಮ ಬಂಗಾಳದ ಐದು ನಗರಗಳನ್ನು ಸಹ ಅವರು ಸ್ಥಾಪಿಸಿದರು. ಅವುಗಳೆಂದರೆ ದುರ್ಗಾಪುರ, ಬಿಧನ್ನಗರ, ಅಶೋಕೆನಗರ, ಕಲ್ಯಾಣಿ ಮತ್ತು ಹಬ್ರಾ. ಅವರು ಬ್ರಹ್ಮ ಸಮಾಜದ ಸದಸ್ಯರೂ ಆಗಿದ್ದರು. ಕಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ, ಅವರು ಕಲ್ಕತ್ತಾ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಯಾಗಿದ್ದರು.

ಅವರ ನೆನಪಿಗಾಗಿ ಕೇಂದ್ರ ಸರ್ಕಾರವೂ ಒಂದು ಪ್ರಶಸ್ತಿಯನ್ನು ಸ್ಥಾಪಿಸಿತ್ತು. 1928 ರಲ್ಲಿ ಅವರು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸ್ಥಾಪನೆಯಲ್ಲಿ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೆಬ್ರವರಿ 4, 1961ರಂದು ಅವರನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ, ಭಾರತ ರತ್ನ ನೀಡಿ ಗೌರವಿಸಲಾಯಿತು.

ವಿಶ್ವದ ಇತರ ದೇಶಗಳಲ್ಲಿ
ವಿವಿಧ ದೇಶಗಳಲ್ಲಿ ವೈದ್ಯರ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ.

ಮೊದಲ ಬಾರಿಗೆ ವೈದ್ಯರ ದಿನವನ್ನು 30 ಮಾರ್ಚ್ 1933ರಲ್ಲಿ ಯುಎಸ್ ರಾಜ್ಯ ಜಾರ್ಜಿಯಾದಲ್ಲಿ ಆಚರಿಸಲಾಯಿತು. ವೈದ್ಯರಿಗೆ ಕಾರ್ಡ್ ಕಳುಹಿಸುವ ಮೂಲಕ ಮತ್ತು ಸತ್ತ ವೈದ್ಯರ ಸಮಾಧಿಯ ಮೇಲೆ ಹೂವುಗಳನ್ನು ಇರಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಅದೇ ದಿನ ಆಸ್ಟ್ರೇಲಿಯಾದಲ್ಲಿ ಆಚರಣೆ ಮಾಡಲಾಗುತ್ತದೆ. ಕುವೈತ್ ನಲ್ಲಿ ಮಾರ್ಚ್ 3ರಂದು, ಬ್ರೆಜಿಲ್ ನಲ್ಲಿ ಅಕ್ಟೋಬರ್ 18, ಕೆನಡದಲ್ಲಿ ಮೇ 1ರಂದು ಅದೇ ತಿಂಗಳು 4ರಂದು ನೇಪಾಳದಲ್ಲಿ, ಕ್ಯೂಬಾದಲ್ಲಿ ಡಿಸೆಂಬರ್ 3ರಂದು ಮತ್ತು ಆಗಸ್ಟ್ 23ರಂದು ಇರಾನ್ ನಲ್ಲಿ ಆಚರಿಸಲಾಗುತ್ತದೆ.

2021ರ ರಾಷ್ಟ್ರೀಯ ವೈದ್ಯರ ದಿನಾಚರಣೆ ಥೀಮ್
ಪ್ರತಿ ವರ್ಷವೂ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಹೊಸ ಹೊಸ ವಿಷಯದ ಆಧಾರದ ಮೇಲೆ ಆಚರಿಸಲಾಗುತ್ತದೆ. ಈ ವರ್ಷದ ಅಂದರೆ 2019ರ ರಾಷ್ಟ್ರೀಯ ವೈದ್ಯರ ದಿನಾಚರಣೆಯ ವಿಷಯವೆಂದರೆ “ವೈದ್ಯರು ಮತ್ತು ಕುಟುಂಬದೊಂದಿಗೆ ಭವಿಷ್ಯವನ್ನು ನಿರ್ಮಿಸುವುದು” ಈ ಥೀಮ್ ನ್ನು ಪ್ರತಿ ವರ್ಷ ಭಾರತೀಯ ವೈದ್ಯಕೀಯ ಸಂಘವು ಘೋಷಿಸುತ್ತದೆ.

2021ರ ವೈದ್ಯರ ದಿನವನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ದ್ವಿತೀಯ ಆರೂಗ್ಯ ಕೇಂದ್ರಗಳಲ್ಲಿ ದುಡಿಯುತ್ತಿರುವ ಅಸಂಖ್ಯಾತ ವೈದ್ಯರಿಗೆ ಹಾಗೂ ವಿಶೇಷ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಕಾರ್ಯ ನಿವಹಿಸುತ್ತಿರುವವರಿಗೆ ಸಮರ್ಪಿಸಲಾಗಿದೆ.

ಸಕಾರಾತ್ಮಕ ಕ್ರಮದಿಂದ ಮರಣ ಪ್ರಮಾಣವನ್ನು ನಾಟಕೀಯವಾಗಿ ಕಡಿಮೆ ಮಾಡಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ.
ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದರೊಂದಿಗೆ, ವೈದ್ಯರ ಪ್ರಾಮುಖ್ಯತೆಯು ನಿಸ್ಸಂದೇಹವಾಗಿ ಈ ವರ್ಷದಲ್ಲಿ ಮುಂಚೂಣಿಯಲ್ಲಿದ್ದಾರೆ.
ತಮ್ಮ ಅನುಕೂಲತೆಯನ್ನು ಗಣನೆಗೆ ತೆಗೆದುಕೊಳ್ಳದೆ ರೋಗಿಯ ಆರೈಕೆಗೆ ಹೆಚ್ಚು ಕಾಲವನ್ನು ವಿನಿಯೋಗಿಸುವ ವೈದ್ಯರುಗಳು ಸದಾ ದೇವತೆಗಳಿಗೆ ಸಮನಾಗಿರುತ್ತಾರೆ.

ವೈದ್ಯರ ನಿಷ್ಠೆ, ಶ್ರಮ ಹಾಗೂ ನಿಸ್ವಾರ್ಥ ಭಾವದಿಂದ ನೀಡುವ ಆರೈಕೆಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಅವರು ತೋರುವ ಸೇವೆ ಹಾಗೂ ಚಿಕಿತ್ಸೆಯು ರೋಗಿಗೆ ಮರುಜನ್ಮವನ್ನು ನೀಡುತ್ತದೆ.

ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಕೊರೊನಾ ಕಾಲ ಘಟ್ಟದಲ್ಲಿ ಅಕ್ಷರಶಃ ಸಾಬೀತಾಗಿದೆ.

ಕಿಲ್ಲರ್ ಕೊರೊನಾದಿಂದ ದೇಶವಾಸಿಗಳ ಅಮೂಲ್ಯ ಜೀವ ರಕ್ಷಿಸಲು ವೈದ್ಯ ಲೋಕ ಟೊಂಕ ಕಟ್ಟಿ ನಿಂತಿದೆ. ಕೋವಿಡ್ 19 ಸೋಂಕಿನ ಹಾವಳಿಯ ಈ ಸಮಯದಲ್ಲಿ ವೈದ್ಯಲೋಕದ ಪರಿಶ್ರಮ ಅಪಾರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ರೋಗದ ಆತಂಕದ ನಡುವೆಯೂ ಮುಂಚೂಣಿ ವಾರಿಯರ್ಗಳಾಗಿ ವೈದ್ಯರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾದದ್ದು. ಜನರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಪ್ರತಿಯೊಬ್ಬ ವೈದ್ಯರಿಗೂ ರಾಷ್ಟ್ರೀಯ ವೈದ್ಯ ದಿನಾಚರಣೆಯ ಶುಭಾಶಯಗಳು.