ಬದಲಾದ ಕಾಲದಲ್ಲಿ ಬರಡಾಯಿತೆ ಪತ್ರಕರ್ತರ ಬದುಕು

ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಇಂದು ದೇಶಾದ್ಯಂತ ಪತ್ರಿಕಾ ದಿನ ಆಚರಣೆ

ಪ್ರಜಾಪ್ರಭುತ್ವದ ನಾಲ್ಕನೆಯ ಆಧಾರಸ್ತಂಭವೆನಿಸಿದ ಮಾಧ್ಯಮ ಕ್ಷೇತ್ರ ಇಂದಿನ ಡಿಜಿಟಲ್ ಕಾಲಘಟ್ಟದಲ್ಲಿ ಮಹತ್ವದ ಬದಲಾವಣೆಗೆ ಸಾಕ್ಷಿ ಯಾಗಿ ನಿಂತಿದೆ.

ಈ ಸಂದರ್ಭದಲ್ಲಿ ಮಾಧ್ಯಮ ಮತ್ತು ಪತ್ರಕರ್ತ ಅದರಲ್ಲೂ ಗ್ರಾಮೀಣ ಭಾಗದ ಪತ್ರಕರ್ತರ ಬಗೆಗಿನ ಸ್ಥಿತಿಗತಿಗಳ ಕುರಿತ ಅವಲೋಕನ

ಸ್ವಾತಂತ್ರ್ಯಪೂರ್ವದಲ್ಲಿ ನಿಶ್ಚಿತ ಧ್ಯೇಯ, ಆದರ್ಶ, ವಸ್ತುನಿಷ್ಠ ಸುದ್ದಿ, ಬರಹಗಳ ಮೂಲಕ ವೃತ್ತಿಧರ್ಮಕ್ಕೆ ಬದ್ಧತೆ ಸಾರಿದ್ದ ಪತ್ರಿಕೋದ್ಯಮ, ಸ್ವಾತಂತ್ರ್ಯಾನಂತರ ಬೇರೆ ಉದ್ಯಮಗಳಂತೆ ಇದೂ ಒಂದು ಉದ್ಯಮವಾಗಿ ನಂತರ ಜಾಹೀರಾತು ಯಾವುದು, ಸುದ್ದಿಯಾವುದು, ಲೇಖನ ಯಾವುದು ಎಂಬುದೇ ತಕ್ಷಣ ಗೊತ್ತಾಗದಷ್ಟು ಪತ್ರಿಕೋದ್ಯಮ ಹೊಸ ರೂಪ ಗೊಂಡಿದೆ.

ಹೆಚ್ಚುತ್ತಿರುವ ಮುದ್ರಣವೆಚ್ಚ, ದುಬಾರಿ ಮುದ್ರಣಕಾಗದ, ಮಾರುಕಟ್ಟೆಯಲ್ಲಿನ ಪೈಪೋಟಿಗಳಿಂದಾಗಿ ಪತ್ರಿಕೆಯ ಮಾಲಿಕರು ಅನಿವಾರ್ಯವಾಗಿ ಜಾಹೀರಾತುದಾರರನ್ನು ಹೆಚ್ಚುಹೆಚ್ಚು ಅವಲಂಬಿಸಬೇಕಾಗಿದೆ. ಪತ್ರಿಕೆಗಳ ಈ ಅಸಹಾಯಕತೆಯನ್ನು ಬಳಸಿಕೊಂಡು ಜಾಹೀರಾತು ನೀಡುವ ಉದ್ಯಮಗಳು ಪತ್ರಿಕೆಗಳ ಮೇಲಿನ ಕಬಂಧ ಹಿಡಿತವನ್ನು ಬಿಗಿಗೊಳಿಸುತ್ತಿವೆ. ಇದರಿಂದಾಗಿ ಪತ್ರಿಕಾರಂಗವನ್ನು ಸದಾಕಾಲ ಉದ್ಯಮಿಗಳು ಮತ್ತು ಸರ್ಕಾರದ ಹಂಗಿನಲ್ಲಿರುವಂತೆ ಮಾಡಿದೆ.

ಕೋವಿಡ್ ಸಂದರ್ಭದಲ್ಲಿ ಪತ್ರಿಕೆಯನ್ನು ಗಮನಿಸಿದರೆ ದಿನಕ್ಕೆ 14ರಿಂದ 16 ಪುಟಗಳದೊಂದಿಗೆ ಬರುತ್ತಿದ್ದ ಪತ್ರಿಕೆಗಳು ಕೇವಲ 6ರಿಂದ 8 ಪುಟಗಳು ಪ್ರಕಟವಾಗುತ್ತಿತು. ಕಾರಣ ಜಾಹೀರಾತುಗಳ ಕೊರತೆ. ಇದೇ ಸಂದರ್ಭದಲ್ಲಿ ದೇಶ ರಾಜ್ಯದ ಪ್ರಮುಖ ಪತ್ರಿಕೆಗಳು ತಮ್ಮ ಅಸಂಖ್ಯಾತ ವರದಿಗಾರರನ್ನು ಮನೆಗೆ ಕಳುಹಿಸಿತು.

ಇದರ ನಡುವೆ ಕೆಲವು ಪತ್ರಕರ್ತರು ನಡೆಸುವ ಕೃತ್ಯಗಳಿಂದ, ಇಡೀ ಮಾಧ್ಯಮರಂಗ ತಲೆತಗ್ಗಿಸಬೇಕಾಗಿದೆ. ಅರ್ಹತೆ ಇಲ್ಲದ, ಓದು ಬರವಣಿಗೆ ಬರದ, ಬದ್ಧತೆ ಇಲ್ಲದ,ಅಪರಾಧ ಹಿನ್ನೆಲೆಯವರು, ರಾಜಕೀಯ ಸಂಬಂಧ ಹೊಂದಿರುವರು ಪತ್ರಿಕೆಗಳನ್ನು ಹೊರ ತರುತ್ತಾ, ಅಧಿಕಾರಿಗಳಿಗೆ, ವ್ಯಾಪಾರಸ್ಥರನ್ನು ರಾಜಕಾರಣಿಗಳನ್ನು ಬೆದರಿಸುತ್ತಾ yellow journalism (ಹಳದಿ ಪತ್ರಿಕೋದ್ಯಮ) ಮಾಡುವಲ್ಲಿ ನಿರತರಾಗಿದ್ದಾರೆ. ಅಲ್ಲದೇ ಸರ್ಕಾರದ ಮಾನ್ಯತೆ ಇಲ್ಲದಿದ್ದರೂ ಜೊತೆಗೆ ಸಾಮಾಜಿಕ ಬದ್ಧತೆ ಇಲ್ಲದಂತಹ ನಾಯಿ ಕೊಡೆಗಳಂತೆ ಹುಟ್ಟಿಕೊಂಡಿರುವ ನ್ಯೂಸ್ ವೆಬ್ ಪೋರ್ಟಲ್ ಗಳು, ಪ್ರೆಸ್ ಎಂಬ ಟ್ಯಾಗ್ ಬೇರೆ, ಇನ್ನೂ ಟಿವಿ ವಾಹಿನಿಗಳಲ್ಲಿ ಬರುವ ಬ್ರೇಕಿಂಗ್ ನ್ಯೂಸ್ಗೆ ಇಂದು ಯಾವ ಕಿಮ್ಮತ್ತೂ ಇಲ್ಲ.

ಏಕೆಂದರೆ ಈ ಸುದ್ದಿ ಪ್ರಸಾರವಾದ ಸ್ವಲ್ಪಹೊತ್ತಿಗೇ ಅದು ನಿಜವಲ್ಲ ಎಂಬುದು ಗೊತ್ತಾಗಿರುತ್ತದೆ. ಸುದ್ದಿಗಳನ್ನು ಎಲ್ಲರಿಗಿಂತ ಮೊದಲು ಪ್ರಸಾರಮಾಡಬೇಕೆಂಬ ಹಪಾಹಪಿಯಲ್ಲಿ ಸುದ್ದಿಗಳ ವಿಶ್ವಾಸಾರ್ಹತೆಯನ್ನು ನಿಖರವಾಗಿ ಪರಿಶೀಲಿಸದೆಯೇ ಹಸಿಹಸಿ ಸುದ್ದಿಗಳನ್ನು ಪ್ರಸಾರಮಾಡಿರುವುದರ ದುಷ್ಪರಿಣಾಮ ಇದು.

ತಪ್ಪು ಸುದ್ದಿ ಪ್ರಸಾರಮಾಡಿದ್ದಕ್ಕೆ ಅನಂತರ ಟಿವಿ ವಾಹಿನಿಗಳ ಕ್ಷಮಾಪಣೆ ಅಥವಾ ವಿಷಾದ ಕೂಡ ಇಲ್ಲದಿರುವುದು ಮಾಧ್ಯಮ ಲೋಕದ ಬಗ್ಗೆ ವೀಕ್ಷಕರಿಗೆ ಅಸಹ್ಯ ಹುಟ್ಟುವಂತೆ ಮಾಡಿದೆ

ಗ್ರಾಮೀಣ ಪ್ರದೇಶಗಳಲ್ಲಿ ಪತ್ರಕರ್ತರ ದುಸ್ಥಿತಿ
ಕೋವಿಡ್-19 ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ಹರಡಿರುವುದರಿಂದ, ಗ್ರಾಮೀಣ ಪ್ರದೇಶಗಳಲ್ಲಿ ಪತ್ರಕರ್ತರ ಸುರಕ್ಷತೆಯು ಈಗ ಹೆಚ್ಚು ಅಪಾಯದಲ್ಲಿದೆ, ಏಕೆಂದರೆ ಹತ್ತಿರದಲ್ಲೇ ಉತ್ತಮ ಆರೋಗ್ಯ ಆರೈಕೆ ಸಿಗುವ ಸಾಧ್ಯತೆಗಳು ಕಡಿಮೆಯಿರಬಹುದು.

ನವದೆಹಲಿ ಮೂಲದ ಇನ್ ಸ್ಟಿಟ್ಯೂಟ್ ಆಫ್ ಪರ್ಸೆಪ್ಷನ್ ಸ್ಟಡೀಸ್ ಭಾರತದಲ್ಲಿ ಕೋವಿಡ್-19ರಿಂದ ಸಂಭವಿಸಿದ ಪತ್ರಕರ್ತರ ಸಾವುಗಳ ಬಗ್ಗೆ ನಡೆಸಿದ ಸಂಶೋಧನೆಯ ಪ್ರಕಾರ, ಏಪ್ರಿಲ್ 1, 2020 ಮತ್ತು ಮೇ 12, 2021ರ ನಡುವಿನ 219 ಸಾವುಗಳಲ್ಲಿ 138 ಸಾವುಗಳು ಮೆಟ್ರೋ ನಗರಗಳಲ್ಲದ ಪ್ರದೇಶಗಳಲ್ಲಿ ಸಂಭವಿಸಿದೆ ಎಂದು ತಿಳಿಸಿದೆ.

ಕೇಂದ್ರ ಸರ್ಕಾರವು ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರೆಂದು ಗುರುತಿಸಿಲ್ಲವಾದರೂ, ಕರ್ನಾಟಕ, ಒಡಿಶಾ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದಂತಹ ರಾಜ್ಯಗಳು ಪತ್ರಕರ್ತರನ್ನು ಈ ವರ್ಗಕ್ಕೆ ಸೇರಿಸಿವೆ ಮತ್ತು ಆದ್ಯತೆಯ ಮೇಲೆ ಲಸಿಕೆ ನೀಡುತ್ತಿವೆ.

ಒಂದು ವೇಳೆ ನೀವು ಮುಂಬೈ ಅಥವಾ ದೆಹಲಿಯಲ್ಲಿದ್ದರೆ, ನಿಮ್ಮ ಧ್ವನಿ ಗಣನೆಗೆ ಬರುತ್ತದೆ. ಈ ಸಮಯದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ವರದಿಗಾರರನ್ನು ರಕ್ಷಿಸಲು ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ಏನು ಮಾಡಿವೆ? ಎಷ್ಟು ಸಂಪಾದಕರು ತಮ್ಮ ವರದಿಗಾರರಿಗೆ ಭರವಸೆ ನೀಡಿದ್ದಾರೆ? ಆದ್ಯತೆಯ ಆಧಾರದ ಮೇಲೆ ಎಷ್ಟು ಜನರು ತಮ್ಮ ವರದಿಗಾರರ ಲಸಿಕೆಗಾಗಿ ಪ್ರಚಾರ ಅಭಿಯಾನ ಮಾಡಿದ್ದಾರೆ? ಗ್ರಾಮೀಣ ಪ್ರದೇಶದ ವರದಿಗಾರರಿಗೆ ಯೋಗ್ಯ ಸಂಬಳ ಸಿಗುವುದಿಲ್ಲ. ಅವರು ಸತ್ತರೆ ಅವರ ಮಕ್ಕಳ ಗತಿ ಏನಾಗಬೇಕು? ಅವರಿಗೆ ಸರ್ಕಾರದಿಂದ ಯಾವುದೇ ಸಹಾಯ ಧನವಿಲ್ಲ, ವಿಮೆಯಾಗಲಿ, ಸುರಕ್ಷತೆ ಮಾತೆ ಇಲ್ಲ. ಕೇವಲ ರಾಜ್ಯದ ಪ್ರಮುಖ ಪತ್ರಿಕೆಯ ಮುಖ್ಯ ವರದಿಗಾರರಿಗೆ ಮಾತ್ರ ಉಚಿತ ಬಸ್ ಪಾಸ್, ಪಿಎಫ್ ಇತರ ಸೌಲಭ್ಯಗಳು ದೊರೆಯುತ್ತದೆ.

ಗ್ರಾಮೀಣ ಭಾರತದ ಪತ್ರಕರ್ತರು ಯಾವುದೇ ಗೌರವ, ಗುರುತಿಸುವಿಕೆಗಳಿಲ್ಲದೆ, ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಾ ಶ್ರಮಿಸುತ್ತಾರೆ. ಅವರು ಕಾರ್ಯ ನಿರ್ವಹಿಸುವ ಪತ್ರಿಕಾ ಸಂಸ್ಥೆಗಳು ನೀಡುವ ಗೌರವ ಧನ ಕೇಳಿದರೆ ಹೌಹಾರುತ್ತಿರಿ. ಸಾಮಾನ್ಯ ಕಾರ್ಮಿಕರಿಗೆ ಸಿಗುವ ಸಂಬಳಕ್ಕಿಂತ ಕಡಿಮೆ. ಅವರು ವರದಿ ಮಾಡಲು ತೆರಳಲು ತಮ್ಮ ಬೈಕ್ ಗಳಿಗೆ ಹಾಕುವ ಪೆಟ್ರೋಲ್ ಗೂ ಸಾಕಾಗುವುದಿಲ್ಲ, ಈಗಲಾದರೂ ಸರ್ಕಾರ ಮತ್ತು ಪತ್ರಿಕಾ ಸಂಸ್ಥೆಗಳು ಗ್ರಾಮೀಣ ಭಾಗದ ಪತ್ರಕರ್ತರ ಬಗ್ಗೆ ಗಮನ ಹರಿಸಲಿ.