ಮೈಸೂರು: ರೋಗದಿಂದ ನರಳುವವರ ಪಾಲಿಗೆ ವೈದ್ಯರು ದೇವರ ಪ್ರತಿನಿಧಿಗಳಿದ್ದಂತೆ ಎಂದು ಶಾಸಕ ಎಲ್ ನಾಗೇಂದ್ರ ಹೇಳಿದರು.
ನಗರ ಬಿಜೆಪಿ ಮಾಧ್ಯಮ ವಿಭಾಗ ಹಾಗೂ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಗುರುವಾರ ಬಿಜೆಪಿ ಕಚೇರಿಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.
ಭಾರತೀಯ ಪರಂಪರೆಯಲ್ಲಿ ದೇವಲೋಕದ ಧನ್ವಂತರಿಯನ್ನು ಆರೋಗ್ಯದ ದೇವತೆ ಎಂದು ಪೂಜಿಸಲಾಗುತ್ತಿದೆ. ಚರಕ, ಶುಶ್ರುತರು ಪಾರಂಪರಿಕ ವೈದ್ಯರಾಗಿದ್ದು ಹೆಮ್ಮೆಯ ವಿಚಾರ ಎಂದು ಹೇಳಿದರು.
ತುಂಬೆ, ಬೇವಿನ ಸೊಪ್ಪಿನಿಂದಲೂ ರೋಗ ನಿವಾರಿಸುವ ಕಲೆ ಭಾರತೀಯ ಋಷಿಮುನಿಗಳಿಗೆ ಕರಗತವಾಗಿತ್ತು. ವೈದ್ಯಕೀಯ ಪದ್ದತಿಯಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ಆಗುತ್ತಲೂ ಇವೆ. ಗ್ರಾಮೀಣ ಭಾಗದ ಸರ್ಕಾರಿ ಮತ್ತು ಖಾಸಗಿ ವೈದ್ಯರ ಸೇವೆ ಅನನ್ಯವಾದುದು ಎಂದರು.
ರೋಗ ವಾಸಿ ಮಾಡುವಲ್ಲಿ ಹತ್ತಾರು ಆತಂಕಗಳನ್ನು ಎದುರಿಸುತ್ತಿರುವ ವೈದ್ಯರ ಬಗ್ಗೆ ಸಮಾಜ ಮೃದು ಭಾವ ತಾಳುವುದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ನಾಗೇಂದ್ರ ಹೇಳಿದರು.
ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ, ಕೋವಿಡ್ ಸಂಕಷ್ಟದಲ್ಲಿ ಕೂಡ ಸಾವಿರಕ್ಕೂ ಅಧಿಕ ವೈದ್ಯರು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಅವರಿಗೆ ಬಿಜೆಪಿ ನಮನ ಸಲ್ಲಿಸುತ್ತದೆ ಎಂದರು.
ಅದೇ ರೀತಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಪತ್ರಕರ್ತರೂ ಕೂಡ ಕೊರೊನಾದ ಕಾಲಘಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟ ನಡೆಸಿದ್ದಾರೆ. ಅವರಿಗೂ ಬಿಜೆಪಿ ಕೃತಜ್ಞತೆ ಅರ್ಪಿಸುತ್ತದೆ ಎಂದು ತಿಳಿಸಿದರು.
ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎನ್ ವಿ ಫಣೀಶ್, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್, ಸೋಮ್ ಸುಂದರ್ , ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ॥ ರವೀಂದ್ರ, ಸಹ ಸಂಚಾಲಕ ಗಿರೀಶ್, ಮಾಧ್ಯಮ ಸಂಚಾಲಕ ಮಹೇಶ್ ರಾಜ್ ಅರಸ್, ಸಹ ಸಂಚಾಲಕ ಪ್ರದೀಪ್ ಕುಮಾರ್, ಸಹ ವಕ್ತಾರ ಕೇಬಲ್ ಮಹೇಶ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜಯಶಂಕರ್, ವಿಕ್ರಂ ಅಯ್ಯಂಗಾರ್, ನಂದಕುಮಾರ್, ಚಂದ್ರಕಲಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ ನಿರ್ದೇಶಕಿ ರೇಣುಕ ರಾಜ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ ಹಾಗೂ ಇನ್ನಿತರರು ಹಾಜರಿದ್ದರು.

