ನಿಮ್ಮ ಸಂಕಷ್ಟ ನಿವಾರಣೆಗೆ ನಾನು, ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ -ಡಿ.ಕೆ. ಶಿವಕುಮಾರ್

ಬೆಂಗಳೂರು: ಕೋವಿಡ್ ಸಂಕಷ್ಟ ನಿವಾರಣೆಗೆ ನಾನು ಹಾಗೂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಹೋರಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ರಾಜಾಜಿನಗರದ ಮಂಜುನಾಥನಗರದಲ್ಲಿ ಆಹಾರ ಕಿಟ್ ಗಳ ವಿತರಣೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ, ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

ಕೋವಿಡ್ ಸಂಕಷ್ಟಪೀಡಿತರಿಗೆ ಸಾಂತ್ವನ ಹೇಳಿ, ಅವರಿಗೆ ಪರಿಹಾರ ಸಿಗುವಂತೆ ಮಾಡಲು ಕಾಂಗ್ರೆಸ್ ಒಂದು ತಿಂಗಳ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ಕಾರ್ಯಕರ್ತರು ನಿಮ್ಮ ಮನೆ ಬಾಗಿಲಿಗೆ ಬಂದಾಗ, ಕೋವಿಡ್ ನಿಂದ ನಿಮಗಾಗಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ನಿಮ್ಮ ಪರ ಹೋರಾಟ ಮಾಡುತ್ತೇವೆ ಎಂದು ಅವರು ತಿಳಿಸಿದರು.

ಕಳೆದ ವರ್ಷ ನಿಮಗೆ 10 ಸಾವಿರ ಕೊಡಿಸಲು ನಾನು ಹಾಗೂ ಸಿದ್ದರಾಮಯ್ಯನವರು ಹೋರಾಟ ಮಾಡಿದೆವು. ಸರ್ಕಾರ 5 ಸಾವಿರ ನೀಡುವುದಾಗಿ ಹೇಳಿತ್ತು. ಆದರೆ ಆ ಹಣ ನಿಮಗೆ ಬಂತಾ.? ಈ ವರ್ಷ ಘೋಷಿಸಿದ 2-3 ಸಾವಿರ ಪರಿಹಾರ ಬಂತಾ.? ಯಾರಿಗೂ ಬಂದಿಲ್ಲ. ನಮ್ಮ ಹೋರಾಟಕ್ಕೆ ಹೆದರಿ ಸರ್ಕಾರ ಕಳೆದ ವರ್ಷ 1900 ಕೋಟಿ, ಈ ವರ್ಷ ಸಾವಿರ ಕೋಟಿ ರುಪಾಯಿ ಪ್ಯಾಕೇಜ್ ಘೋಷಿಸಿತು. ಚಾಲಕರಿಗೆ 5 ಸಾವಿರ ನೀಡುತ್ತೇವೆ ಎಂದರು, ಅವರಿಗೂ ಹಣ ಬರಲಿಲ್ಲ. ಇದು ನುಡಿದಂತೆ ನಡೆಯದ ಸರ್ಕಾರ. ಅದಕ್ಕಾಗಿಯೇ ಇಂದು ಇಲ್ಲಿನ 5 ಸಾವಿರ ಜನಕ್ಕೆ ಫುಡ್ ಕಿಟ್ ನೀಡಲು ನಮ್ಮ ನಾಯಕರು ಮುಂದಾಗಿದ್ದಾರೆ.

ನಮ್ಮ ಶಾಸಕರು ಇರುವ ಕಡೆ ಮಾತ್ರವಲ್ಲ, ಎರಡು ಮೂರು ಬಾರಿ ನಮ್ಮ ಅಭ್ಯರ್ಥಿಗಳು ಸೋತಿರುವ ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದ ಬಡವರಿಗೆ ಸಹಾಯ ಹಸ್ತ ನೀಡಲಾಗಿದೆ. ಅಲ್ಲಿನ ಬೇರೆ ಪಕ್ಷದ ಶಾಸಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಮ್ಮ ನಾಯಕರುಗಳು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಸೋತಿದ್ದರೂ ಸಂಕಷ್ಟದ ಸಮಯದಲ್ಲಿ ನಿಮ್ಮ ಕೈ ಬಿಡಲಿಲ್ಲ. ಇದು ಬೆಂಗಳೂರಿನ ವಿಚಾರ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ನಮ್ಮವರು ಜನರ ಸಹಾಯಕ್ಕೆ ನಿಂತಿದ್ದಾರೆಂದರು.

ಕೊರೋನಾ ಸಂತ್ರಸ್ತರಿಂದ ಅರ್ಜಿ ಹಾಕಿಸಿ, ಅವರಿಗೆ ಪರಿಹಾರ ಒದಗಿಸಲು ವಾರ್ಡ್ ವಾರು ತಂಡಗಳನ್ನು ರಚಿಸಿ ಜನರಿಗೆ ನೆರವಾಗಲು ಕಾರ್ಯಕ್ರಮ ರೂಪಿಸಿದ್ದೇವೆ. ಸತ್ತವರ ಕುಟುಂಬ, ಆಸ್ಪತ್ರೆಯಲ್ಲಿ ನರಳಾಡಿದವರು, ಉದ್ಯೋಗ, ಆದಾಯ ಕಳೆದುಕೊಂಡವರಿಗೆ ಆಗಿರುವ ನಷ್ಟ, ಸಮಸ್ಯೆಯನ್ನು ಪಟ್ಟಿ ಮಾಡಿಕೊಡಿ. ನಿಮ್ಮ ಪರವಾಗಿ ನಾನು ಹಾಗೂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಹೇಗೆ ಹೋರಾಟ ಮಾಡುತ್ತೇವೆ ಎಂಬುದನ್ನು ನೋಡಿಎಂದರು ಡಿಕೆಶಿವಕುಮಾರ್.

ನಿಮ್ಮ ನೋವಿಗೆ ಸರಕಾರದ ಯಾರೂ ಸ್ಪಂದಿಸಲಿಲ್ಲ. ಆಸ್ಪತ್ರೆಯಲ್ಲಿ ಹಾಸಿಗೆ ಸಿಗಲಿಲ್ಲ. ಪರಿಹಾರ ಪಡೆಯಲು ನೀವು ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಂತೆ. ಇದಕ್ಕಾಗಿಯೇ ನಾವು ಕಾರ್ಯಕ್ರಮ ರೂಪಿಸಿದ್ದು, ನಿಮ್ಮ ಮನೆಗೆ ನಮ್ಮ ಕಾರ್ಯಕರ್ತರು ಬರುತ್ತಾರೆ. ನಿಮಗೆ ಪರಿಹಾರ ಕೊಡಿಸಲು ನಾವು ಪ್ರಯತ್ನಿಸುತ್ತೇವೆ. ಮುಂದಿನ ಬಾರಿ ನೀವು ನಮ್ಮ ಪಕ್ಷವನ್ನು ಅಧಿಕಾರಕ್ಕೆ ತನ್ನಿ. ನಿಮ್ಮ ಋಣ ಹೇಗೆ ತೀರಿಸುತ್ತೇವೆ ಎಂಬುದರ ಬಗ್ಗೆ ಮುಂದೆ ಮಾತನಾಡುತ್ತೇನೆ. ನಮ್ಮ ಚುನಾವಣಾ ಪ್ರಣಾಳಿಕೆ ಬಂದಾಗ ಏನು ಹೇಳಬೇಕೋ ಅದನ್ನು ಹೇಳುತ್ತೇವೆ ಎಂದು ತಿಳಿಸಿದರು.