ಅನ್ಯ ಪಕ್ಷಗಳ ಲಿಂಗಾಯತ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ -ಡಿ.ಕೆ. ಶಿವಕುಮಾರ್

ಕಲಬುರ್ಗಿ: ಬೇರೆ, ಬೇರೆ ಪಕ್ಷಗಳ ಲಿಂಗಾಯತ ಸಮುದಾಯದ ನಾಯಕರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕಲ್ಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಅನ್ಯ ಪಕ್ಷಗಳ ಬಹಳಷ್ಟು ಮಂದಿ ಲಿಂಗಾಯತ ಸಮುದಾಯದ ನಾಯಕರು, ಕಾರ್ಯಕರ್ತರು ನಮ್ಮ ಪಕ್ಷದತ್ತ ಮುಖ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಎಂ.ಬಿ ಪಾಟೀಲ್, ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಅವರು ಸೇರಿದಂತೆ ಸಮುದಾಯದ ಅನೇಕ ನಾಯಕರು ಇದ್ದಾರೆಂದರು.

ಬಿಜೆಪಿಯವರು ಲಿಂಗಾಯತ ಸಮುದಾಯವನ್ನು ಅವರ ಆಸ್ತಿ ಎಂದು ಭಾವಿಸಿದ್ದಾರೆ. ಆದರೆ ಅದು ಸತ್ಯ ಅಲ್ಲ. ನಮ್ಮಲ್ಲೂ ಲಿಂಗಾಯತ ಸಮುದಾಯದ ಶಾಸಕರು ಇದ್ದಾರೆ. ನಾಯಕತ್ವ ಗುಣ ಇರುವವರೂ ಇದ್ದಾರೆ. ಈ ಸಮುದಾಯದ ಅನೇಕ ನಾಯಕರು ನಮ್ಮ ಪಕ್ಷ ಸೇರಲು ಮುಂದೆ ಬಂದಿದ್ದಾರೆ. ಈಗಲೇ ಆ ಬಗ್ಗೆ ಹೆಚ್ಚಿನ ವಿವರ ನೀಡುವುದಿಲ್ಲ. ಅವರನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹೆಚ್ಚಿನ ಮಾಹಿತಿ ನೀಡುತ್ತೇನೆಂದರು.

ಈ ಭಾಗದಲ್ಲಿ ಮಳೆ ಆಗುತ್ತಿದ್ದು ರೈತರಲ್ಲಿ ಸಂತಸವಿದೆ. ಇಂದು ಮತ್ತು ನಾಳೆ ಬಿಜಾಪುರ, ಬಾಗಲಕೋಟೆಯಲ್ಲಿ ಬಂಜಾರ ಸಮಾಜದ ತಾಂಡಾಗಳಿಗೆ ಭೇಟಿ ನೀಡುತ್ತೇನೆ. ಇದರ ಜತೆಗೆ ನೇಕಾರರು ಹಾಗೂ ದಲಿತ ಸಮುದಾಯದ ಸಮಸ್ಯೆಗಳ ಬಗ್ಗೆಯೂ ತಿಳಿದುಕೊಳ್ಳುತ್ತೇನೆಂದರು.

ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿದ್ದೇವೆ ಎಂದು ಸರಕಾರ ಎಲ್ಲ ಕಡೆ ಪ್ರಚಾರ ಪಡೆಯುತ್ತಿದೆ. ಆದರೆ ಎಲ್ಲೂ ಲಸಿಕೆ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಬೆಂಗಳೂರಿಗೆ ವಿಶೇಷ ಕಾರ್ಯಕ್ರಮ ಬೇಕು
ಬೆಂಗಳೂರು ರಾಜ್ಯದ ಹೃದಯ ಭಾಗ. ಬೆಂಗಳೂರಿನ ಸಮಗ್ರ ಅಭಿವೃದ್ಧಿ ಮಾಡಲು ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನ ಹಿತ ಹಾಗೂ ಅಭಿವೃದ್ಧಿಗೆ ಏನು ಮಾಡಬೇಕು ಎಂದು ಅಲ್ಲಿನ ನಾಯಕರ ಜತೆ ಚರ್ಚಿಸಿದ್ದೇವೆ. ಬೆಂಗಳೂರಿಗಾಗಿ ಪ್ರತ್ಯೇಕ ಹಾಗೂ ಆಕರ್ಷಕ ಕಾರ್ಯಕ್ರಮ ರೂಪಿಸಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.