ಬೆಂಗಳೂರು: ರಾಜ್ಯ ಕಂಡ ಅಪರೂಪದ ರಾಜಕಾರಣಿ, ಮಂಡ್ಯದ ಮಾಜಿ ಸಂಸದ, ರೈತ ನಾಯಕ ಜಿ.ಮಾದೇಗೌಡರು ಇನ್ನಿಲ್ಲ.
ವಯೋಸಹಜ ಅನಾರೋಗ್ಯದಿಂದ ಕೆಲ ದಿನಗಳಿಂದ ಕೆ.ಎಂ.ದೊಡ್ಡಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾದೇಗೌಡರು ತಮ್ಮ 92ನೇ ವಯಸ್ಸಿನಲ್ಲಿ ನಮ್ಮನ್ನು ಅಗಲಿದ್ದಾರೆ. ಶನಿವಾರ ಸಂಜೆ ಏಳೂವರೆ ಗಂಟೆ ಸುಮಾರಿಗೆ ಜಿ. ಮಾದೇಗೌಡರು ನಿಧನರಾಗಿದ್ದಾರೆ.
ಆರು ಸಲ ಶಾಸಕರಾಗಿ, 2 ಸಲ ಸಚಿವರಾಗಿದ್ದ ಮಾದೇಗೌಡರು ಮಂಡ್ಯ ಲೋಕಸಭೆ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು.
ಮಂಡ್ಯ ನೆಲದ ಅಪ್ಪಟ ಹೋರಾಟಗಾರರಾದ ಜಿ.ಮಾದೇಗೌಡರು, ತಮ್ಮ ಜನಪರ ಹೋರಾಟಗಳಿಂದ ಸಾಮಾಜಿಕ ಜೀವನದಲ್ಲಿ ಅಪಾರ ಗೌರವ ಗಳಿಸಿದವರು. ದಶಕಗಳ ನಿರಂತರ ಹೋರಾಟದ ಜತೆಗೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಗೌಡರ ಕೊಡುಗೆ ಅನನ್ಯ. ತಮ್ಮ ರಾಜಕೀಯ ಭವಿಷ್ಯವನ್ನೂ ಲೆಕ್ಕಿಸದೇ ಕಾವೇರಿ ಹೋರಾಟದಲ್ಲಿ ರೈತರ ಪರ ನಿಂತಿದ್ದ ಅವರು, ಅಪ್ಪಟ ಗಾಂಧೀವಾದಿಯಾಗಿದ್ದರು.
ಬದುಕಿನುದ್ದಕ್ಕೂ ಮೌಲ್ಯಗಳಿಗೆ ಬದ್ಧರಾಗಿ ಆದರ್ಶ ಜೀವನ ನಡೆಸಿದ್ದರು ಜಿ. ಮಾದೇಗೌಡರು. ಮಂಡ್ಯದಲ್ಲಿ ಗಾಂಧೀಭವನ, ಗಾಂಧೀಗ್ರಾಮ, ಗುಡಿ ಕೈಗಾರಿಕೆ, ವಾಚನಾಲಯ ಮುಂತಾದವುಗಳ ಸ್ಥಾಪನೆಗೆ ಅವರು ಕಾರಣರಾಗಿದ್ದರು.
ಮಂಡ್ಯದ ಬಂಧೀಗೌಡ ಬಡಾವಣೆ ನಿವಾಸಿಯಾಗಿದ್ದ ಮಾದೇಗೌಡರು, ಮದ್ದೂರು ತಾಲೂಕಿನ ಗುರುದೇವರ ಹಳ್ಳಿ ಗ್ರಾಮದವರು. ಮೃತರಿಗೆ ಪತ್ನಿ, ಡಾ. ಪ್ರಕಾಶ್, ಮಧು ಮಾದೇಗೌಡ ಸೇರಿದಂತೆ ನಾಲ್ವರು ಪುತ್ರರು, ಪುತ್ರಿ ಇದ್ದಾರೆ.

