ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ವಾಣಿಜ್ಯ ವ್ಯವಹಾರಕ್ಕೆ ಮತ್ತಷ್ಟು ಸಡಿಲಕೆ ಮಾಡಲಾಗಿದ್ದು, ರಾಜ್ಯದಲ್ಲಿ ಕೋವಿಡ್ ಅನ್ಲಾಕ್ 4.0 ಮಾರ್ಗಸೂಚಿಯನ್ನು ಭಾನುವಾರ ಹೊರಡಿಸಲಾಗಿದೆ.
ಹೊಸ ಮಾರ್ಗಸೂಚಿ ಸೋಮವಾರ (ಜು. 19)ದಿಂದ ಜಾರಿಗೆ ಬರಲಿದ್ದು, ಚಲನ ಚಿತ್ರಮಂದಿರಗಳು ತೆರೆದುಕೊಳ್ಳಲಿವೆ. ಶೇ. 50ರಷ್ಟು ಸೀಟುಗಳನ್ನು ತುಂಬಲು ಅವಕಾಶ ಕಲ್ಪಿಸಲಾಗಿದೆ. ಜು. 26ರಿಂದ ಪದವಿ ಕಾಲೇಜುಗಳು ಆರಂಭವಾಗಲಿವೆ.
ಭಾನುವಾರ ತಮ್ಮ ನಿವಾಸದಲ್ಲಿ ಹಿರಿಯ ಸಚಿವರು, ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೋವಿಡ್ ಸೋಂಕು ಇಳಿಮುಖ ಆಗುತ್ತಿರುವ ಹಿನ್ನೆಲೆಯಲ್ಲಿ ಜನರಿಗೆ ಮತ್ತಷ್ಟು ರಿಯಾಯಿತಿ ನೀಡುವ ನಿರ್ಧಾರ ಕೈಗೊಂಡರು. ಜತೆಗೆ, ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಅವಧಿಯಲ್ಲೂ ಒಂದು ಗಂಟೆ ಕಡಿತಗೊಳಿಸಿ, ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗೆ ಮಾತ್ರ ರಾತ್ರಿ ಕರ್ಫ್ಯೂ ವಿಧಿಸಿ ನಿರ್ಣಯ ಕೈಗೊಂಡಿದ್ದಾರೆ.
ಈಗಾಗಲೇ ಆನ್ಲೈನ್ ಮೂಲಕ ನಡೆಯುತ್ತಿರುವ ಪದವಿ ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ಸರಕಾರ ನಿರ್ಧರಿಸಿದ್ದು, ಜುಲೈ 26ರಿಂದ ನೇರ ಅಥವಾ ಆಫ್ಲೈನ್ ತರಗತಿಗಳು ಆರಂಭವಾಗಲಿವೆ.
ತರಗತಿಗಳಿಗೆ ಹಾಜರಾಗಲಿಚ್ಛಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿರಬೇಕು. ಇನ್ನು ಚಿತ್ರಮಂದಿರಗಳಲ್ಲಿ ಶೇ.. 50ರಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ.
ದೇವಾಲಯಗಳಲ್ಲಿ ಪೂಜೆ ಪುನಸ್ಕಾರಕ್ಕೆ ಅವಕಾಶ ನೀಡಲಾಗಿದೆ. ಈಜುಕೊಳ ತೆರೆಯಲು ಅನುಮತಿ ನೀಡಲಾಗಿಲ್ಲ. ಆದರೆ ದೇವಾಲಯ ಮತ್ತು ಸಿನಿಮಾ ಮಂದಿರಗಳಲ್ಲಿ ಕೋವಿಡ್ ನಿಯಮಗಳನ್ನು ಕಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.
ಉಳಿದಂತೆ ಬಾರ್ ಗಳಲ್ಲಿ ಮದ್ಯ ಸೇವನೆಗೆ ಈವರೆಗೆ ವಿಧಿಸಲಾಗಿದ್ದ ಶೇ.. 50ರಷ್ಟು ಮಿತಿ ಮುಂದುವರಿಸಲಾಗಿದೆ. ರಾತ್ರಿ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಕಡಿತ ಮಾಡಿದ ಕಾರಣಕ್ಕೆ ಬಾರ್ ಗಳಲ್ಲಿ ಮುಂದಿನ ದಿನಗಳಲ್ಲಿ ರಾತ್ರಿ 10 ಗಂಟೆ ತನಕ ಮದ್ಯ ಸೇವನೆಗೆ ಅವಕಾಶ ಕೊಡಲಾಗಿದೆ. ಆದರೆ, ಪಬ್ ಗಳಲ್ಲಿ ಮದ್ಯ ಸೇವನೆ, ರಾತ್ರಿ ಪಾರ್ಟಿಗಳಿಗೆ ಅವಕಾಶ ಇಲ್ಲ. ಹಾಗೆಯೇ ಒಳಾಂಗಣ ಚಿತ್ರೀಕರಣ, ಕ್ರೀಡಾಂಗಣಗಳಿಗೂ ಅವಕಾಶ ನೀಡಲಾಗಿಲ್ಲ. ಮದುವೆಗೆ 100 ಜನರ ಮಿತಿ ಇದ್ದು, ಅಂತ್ಯಕ್ರಿಯೆಯಲ್ಲಿ 20 ಜನರಷ್ಟೇ ಪಾಲ್ಗೊಳ್ಳುವ ನಿಯಮವನ್ನು ಮುಂದುವರಿಸಲಾಗಿದೆ.
ಡಾ. ಸುಧಾಕರ್ ಇರಲಿಲ್ಲ
ಅತ್ಯಂತ ಮಹತ್ವದ ಈ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಭಾಗಿಯಾಗಿರಲಿಲ್ಲ. ರಾಜ್ಯ ಕೋವಿಡ್ ಕಾರ್ಯಪಡೆ ಅಧ್ಯಕ್ಷರೂ ಆದ ಡಿಸಿಎಂ ಅಶ್ವತ್ಥನಾರಾಯಣ, ಸಚಿವರಾದ ಅಶೋಕ್, ಅರವಿಂದ ಲಿಂಬಾವಳಿ ಮಾತ್ರ ಭಾಗಿಯಾಗಿದ್ದರು. ಮುಖ್ಯ ಕಾರ್ಯದರ್ಶಿ ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ಎಸ್. ರಮಣರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಸುಧಾಕರ್ ಗೈರಿಗೆ ಕಾರಣ ಗೊತ್ತಾಗಿಲ್ಲ.

