ಮೈಸೂರು: ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ, ಸರ್ಕಲ್ ಗಳಲ್ಲಿ, ಗೋಡೆ ಹಾಗೂ ಇತರೆ ಯಾವುದೇ ಸ್ಥಳಗಳಲ್ಲಿ ಯಾವುದೇ ಸಂಸ್ಥೆಗಳು, ವ್ಯಕ್ತಿಗಳು, ಕಂಪನಿಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಬ್ಯಾನರ್ಸ್, ಪ್ಲೆಕ್ಸ್, ಬಾವುಟ, ಬಂಟಿಂಗ್ಸ್ ಅಳವಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಅಂದಿನ ಪಾಲಿಕೆ ಆಯುಕ್ತರಾಗಿದ್ದ ಗುರುದತ್ ಹೆಗಡೆಯವರು ಆದೇಶ ಹೊರಡಿಸಿದ್ದರು. ಆ ನಿಯಮವೇನಾದರೂ ಬದಲಾಗಿದೆಯಾ? ಎಂಬ ಪ್ರಶ್ನೆ ಮೈಸೂರಿಗರನ್ನು ಕಾಡುತ್ತಿದೆ.
ಯಾಕೆಂದರೆ ಶನಿವಾರ ಕಾಂಗ್ರೆಸ್ ಪಕ್ಷದ ಸಭೆ ಇರುವ ಹಿನ್ನೆಲೆಯಲ್ಲಿ ರಾಜಕೀಯ ನಾಯಕರು ಭಾಗವಹಿಸುತ್ತಿರುವುದರಿಂದ ನಗರದ ಪ್ರಮುಖ ಬೀದಿಗಳಲ್ಲಿ ಪ್ಲೆಕ್ಸ್, ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬ್ಯಾನರ್, ಬಾವುಟ, ಬಂಟಿಂಗ್ ಅಳವಡಿಸಿ ಸಾರ್ವಜನಿಕ ಪ್ರದೇಶಗಳನ್ನು ವಿರೂಪಗೊಳಿಸುತ್ತಿರುವುದು ಕಂಡು ಬಂದಿದೆ. ಈ ರೀತಿ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಆಕ್ಟ್-1981ರ ಕಾಯ್ದೆ ಕಲಂ 3ರನ್ವಯ ಹೇಳಲಾಗಿದೆ.
1976ರ ರಾಜ್ಯ ಪೌರನಿಗಮಗಳ ಕಾಯ್ದೆ ಪ್ರಕರಣ 135, 136, 137 ಮತ್ತು 138 ರನ್ವಯ ನಗರ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಪ್ಲೆಕ್ಸ್, ಬ್ಯಾನರ್ಗಳನ್ನು ಹಾಕುವುದು ನಿಯಮ ಉಲ್ಲಂಘನೆ ಆಗುತ್ತದೆ.
ಕಾಂಗ್ರೆಸ್ ಸಭೆ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆ ಸಾರ್ವಜನಿಕ ಸ್ಥಳಗಲ್ಲಿ ಬ್ಯಾನರ್, ಪ್ಲೆಕ್ಸ್ ಗಳು ಕಂಡು ಬಂದಿದ್ದು ಮಹಾನಗರ ಪಾಲಿಕೆ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

