ಬೆಂಗಳೂರು: ನಗರದ ಮಧ್ಯಮ ವರ್ಗದ ಮಂದಿಗೆ ನಕಲಿ ದೇಶಭಕ್ತಿಯನ್ನು ಹೇಳುತ್ತಿದ್ದ ಬಿಜೆಪಿ ಈಗ ನಗರ ವಾಸಿಗಳ ಮತ್ತು ತೆರಿಗೆದಾರರ ಬದುಕನ್ನು ನರಕ ಮಾಡಿಟ್ಟಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಆರೋಪಿಸಿದರು.
ಗುರುವಾರ ತಮ್ಮ ನಿವಾಸದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಹೇಳಿದ್ದು ಹೀಗಿದೆ:
ವಿಪರೀತ ಬೆಲೆ ಏರಿಕೆ ಮತ್ತು ಪರೋಕ್ಷ ಹಾಗೂ ಪ್ರತ್ಯಕ್ಷ ತೆರಿಗೆಗಳ ಭಾರಕ್ಕೆ ನಗರ ಪ್ರದೇಶಗಳಲ್ಲಿರುವ ಜನರು, ಮಧ್ಯಮ ವರ್ಗದ ಮಂದಿ ಹೈರಾಣಾಗಿ, ಬೇಸತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಡೀ ದೇಶದ ಜನ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದಾಗ ಬಿಜೆಪಿ ಮತ್ತು ಪರಿವಾರ ದೇಶದ ಜನತೆಯ ಜತೆಗೆ ನಿಲ್ಲಲಿಲ್ಲ. ಹೀಗಾಗಿ ಬಿಜೆಪಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇಲ್ಲ ಮತ್ತು ಬಿಜೆಪಿಯಲ್ಲಿ ಹುತಾತ್ಮರಾದವರು ಯಾರೂ ಇಲ್ಲ. ಅದಕ್ಕೇ ಬಿಜೆಪಿ ಹೆಚ್ಚೆಚ್ಚು ದೇಶಭಕ್ತಿಯ ಬಗ್ಗೆ ಮಾತನಾಡುತ್ತದೆ ಎಂದರು.
ವಂದೇ ಮಾತರಂ, ಜೈ ಜವಾನ್-ಜೈ ಕಿಸಾನ್, ಸ್ವದೇಶಿ ಘೋಷಣೆಗಳೆಲ್ಲಾ ಸ್ವಾತಂತ್ರ್ಯ ಹೋರಾಟದ ನಾಯಕರುಗಳು ಕೊಟ್ಟಿದ್ದು. ಈ ಘೋಷಣೆಗಳಿಗೂ ಬಿಜೆಪಿಗೂ ಯಾವ ಸಂಬಂಧವೂ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ದೇಶದ ಜನರ ಹೋರಾಟದ ಜತೆಗೆ ನಿಂತಿದ್ದು ಕಾಂಗ್ರೆಸ್ ಪಕ್ಷ ಎಂದು ಅವರು ಹೇಳಿದರು.
ಬೆಲೆ ಏರಿಕೆ ಮತ್ತು ಹಣದುಬ್ಬರದಿಂದ ನಗರವಾಸಿಗಳ ಬದುಕು ನರಕವಾಗಿದೆ ಎಂದರು.
ಒಂದು ವಾರದಲ್ಲಿ ಅಡುಗೆ ಸಿಲಿಂಡರ್ ಬೆಲೆ 50 ರೂ. ಹೆಚ್ಚಾಗಿ ನಗರದಲ್ಲಿ 886 ರೂಪಾಯಿ ಗ್ರಾಮೀಣ ಭಾಗದಲ್ಲಿ 900 ರೂಪಾಯಿ ತಲುಪಿದೆ. ದಿನನಿತ್ಯ ಬಳಕೆಯ ಎಲ್ಲಾ ವಸ್ತುಗಳ ಬೆಲೆಯೂ ಆಕಾಶ ಮುಟ್ಟುತ್ತಿದೆ. ಅಚ್ಛೆ ದಿನ್ ಅಂದರೆ ಇದೇನಾ?ಕೇಂದ್ರ ಸರ್ಕಾರ ನಗರ ಪ್ರದೇಶಗಳಿಗೆ ಕೊಡುತ್ತಿದ್ದ ಅನುದಾನ ಕಡಿತಗೊಳಿಸಿದೆ ಎಂದರು.
ಅಂಬಾನಿ ಆಸ್ತಿ ಹೆಚ್ಚುತ್ತಿದೆ! ಹೇಗೆ?ತೆರಿಗೆದಾರರ, ನಗರ ವಾಸಿಗಳ, ಗ್ರಾಮೀಣ ಜನರನ್ನು ಬೆಲೆ ಏರಿಕೆಯ ನರಕದಲ್ಲಿ ನರಳಿಸುತ್ತಿರುವ ಬಿಜೆಪಿ ಸರ್ಕಾರ ಕಾರ್ಪೋರೇಟ್ ಶ್ರೀಮಂತರ ಆಸ್ತಿ ಪ್ರತೀ ವರ್ಷ ಲಕ್ಷ ಲಕ್ಷ ಕೋಟಿಗಳ ಗಡಿ ದಾಟಿಸುತ್ತಿದೆ.
2016ರಿಂದ ಅಂಬಾನಿಯ ಖಾಸಗಿ ಆಸ್ತಿ ಪ್ರತೀವರ್ಷ ದುಪ್ಪಟ್ಟಾಗುತ್ತಲೇ ಇದೆ. ಅಂಬಾನಿಯ ಆಸ್ತಿ ಎರಡೂವರೆ ವರ್ಷದಲ್ಲಿ 12.5 ಲಕ್ಷ ಕೋಟಿ ಹೆಚ್ಚಾಗಿದೆ. ಆದರೆ ಇದೇ ಅಂಬಾನಿ ಮಾಡಿದ್ದ 4.5 ಲಕ್ಷ ಕೋಟಿ ಬ್ಯಾಂಕ್ ಸಾಲವನ್ನು ವಸೂಲಾಗದ ಸಾಲ ಎಂದು ತೀರ್ಮಾನಿಸಿ ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ತಾನು ಸಾಲ ಮಾಡಿದ್ದ ಬ್ಯಾಂಕ್‌ಗಳನ್ನೇ ಖರೀದಿ ಮಾಡುವ ಮಟ್ಟಕ್ಕೆ ಬೆಳೆದಿರುವ ಅಂಬಾನಿಯ ಆಸ್ತಿ ಇಷ್ಟೊಂದು ಪ್ರಮಾಣದಲ್ಲಿ ಹೆಚ್ಚುತ್ತಿದ್ದರೂ ಈತ ಏಕೆ ಬ್ಯಾಂಕ್ ಸಾಲವನ್ನು ತೀರಿಸುತ್ತಿಲ್ಲ?” ಎಂದು ಸುಬ್ರಮಣ್ಯಸ್ವಾಮಿ ಅವರು ಪ್ರಶ್ನಿಸಿದ್ದಾರೆಂದರು.
ರೈತರು ಸಾಲ ತೀರಿಸಿಲ್ಲ ಎಂದು ಅವರ ಟ್ರಾಕ್ಟರ್‌ಗಳನ್ನು ಜಪ್ತಿ ಮಾಡುವ ಬಿಜೆಪಿ ಸರ್ಕಾರ, ಮೋದಿ ಪ್ರಧಾನಿ ಆದ 7 ವರ್ಷಗಳಲ್ಲಿ 7 ಲಕ್ಷ ಕೋಟಿಯಷ್ಟು ಕಾರ್ಪೋರೇಟ್ ಶ್ರೀಮಂತರ ಸಾಲವನ್ನು ಮನ್ನಾ ಮಾಡಿದೆ. ಇದರಲ್ಲಿ ಅಂಬಾನಿ ಒಬ್ಬರದ್ದೇ 4.5 ಲಕ್ಷ ಕೋಟಿ ಸೇರಿದೆ ಎಂದು ತಿಳಿಸಿದರು.
ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವ ಮೋದಿ ಅವರು, ಈಗ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದೆಲ್ಲಾ ಯಾರ ಅವಧಿಯಲ್ಲಿ ಆಗಿದ್ದು? ದೇಶದ ಜನ ಕಳೆದ 70 ವರ್ಷಗಳಲ್ಲಿ ಸೃಷ್ಟಿಸಿದ 6 ಲಕ್ಷ ಕೋಟಿ ಆಸ್ತಿಯನ್ನು ಮಾರಾಟ ಮಾಡುತ್ತಿರುವ ಮೋದಿಯವರು ಈ ದೇಶದ ಜನರ ಅನುಮತಿ ಪಡೆದಿದ್ದಾರಾ?ಒಂದು ಕಡೆ ತೆರಿಗೆ ಮೂಲಕ ಸುಲಿಗೆ-ಬೆಲೆ ಏರಿಕೆ ಮೂಲಕ ಬಿಜೆಪಿ ಲೂಟಿ ಮಾಡುತ್ತಿರುವ ಸರ್ಕಾರ ಎಂದು ಟೀಕಿಸಿದರು.

