ನಂಜನಗೂಡು ದೇವಾಲಯದಲ್ಲಿದ್ದ ಭದ್ರಕಾಳಿ ವಿಗ್ರಹ ನಾಪತ್ತೆ ?

ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಉಚ್ಚಗಣಿ ದೇವಾಲಯ ತೆರವು ಅವಾಂತರ ಮಾಸುವ ಮುನ್ನವೇ ಮತ್ತೊಂದು ವಿವಾದ ನಂಜನಗೂಡಿನಲ್ಲಿ ಕಂಡು ಬಂದಿದೆ.

ನಂಜನಗೂಡಿನ ಪ್ರಸಿದ್ಧ ಶ್ರೀಕಂಠೇಶ್ವರನ ದೇವಾಲಯದಲ್ಲಿನ ವೀರಭದ್ರ ಮೂರ್ತಿಯ ಪಕ್ಕದಲ್ಲಿದ್ದ ಭದ್ರಕಾಳಿ ವಿಗ್ರಹವನ್ನು ತೆರವುಗೊಳಿಸಲಾಗಿದೆ.

ನಂಜನಗೂಡು ನಂಜುಂಡೇಶ್ವರನ ದೇವಾಲಯದ ಒಳ ಆವರಣದ ಬಲಭಾಗದಲ್ಲಿ ಇರುವ ಶಿವನ ಅವತಾರ ಮೂರ್ತಿಗಳಲ್ಲಿ ಒಂದಾದ ವೀರಭದ್ರೇಶ್ವರ ಮೂರ್ತಿಯ ಪಕ್ಕದಲ್ಲಿ ಇದ್ದ ಭದ್ರಕಾಳಿ ವಿಗ್ರಹ ಕಾಣೆಯಾಗಿರುವುದು ಹಲವಾರು ಅನುಮಾನಕ್ಕೆಡೆ ಮಾಡಿದೆ.

ಪ್ರತಿದಿನ ಪೂಜೆ ಪುನಸ್ಕಾರಗಳನ್ನುಸಲ್ಲಿಸಲಾಗುತ್ತಿದ್ದ ಭದ್ರಕಾಳಿ ವಿಗ್ರಹ ದಿಢೀರ್ ಸ್ಥಳಾಂತರ ಮಾಡಿದ ಉದ್ದೇಶವಾದರೂ ಏನು ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಸ್ಥಳಾಂತರಗೊಂಡ ಸ್ಥಳದ ಬಳಿ ಹೋಮ ನಡೆಸಿದ ಕುರುಹುಗಳಿವೆ. ವಿಗ್ರಹಗಳಿಗೆ ಪೂಜೆ ಮಾಡುವ ಕಾರ್ಯ ಹೊರತು ಪಡಿಸಿದರೆ ಸ್ಥಳಾಂತರ ಮಾಡಬೇಕಿದ್ದಲ್ಲಿ ಸಾಕಷ್ಟು ನಿಯಮಗಳನ್ನು ಅನುಸರಿಸಬೇಕಿದೆ. ಮೂರ್ತಿ ಸ್ಥಳಾಂತರ ಮಾಡಲಾಗಿದೆಯೇ ಅಥವಾ ಕಾಣೆಯಾಗಿದೆಯೇ ಎಂಬುದು ಅಷ್ಟಾಗಿ ಯಾರಿಗೂ ತಿಳಿಯದು.

ಭಾರತೀಯ ಪುರಾತತ್ವ ಇಲಾಖೆಗೆ ಒಳಪಟ್ಟಿರುವ ಈ ದೇವಾಲಯದ ಸುಮಾರು ಮೂರು ಅಡಿಗಳಷ್ಟು ಎತ್ತರದ ಭದ್ರ ಕಾಳಿಯ ಮೂರ್ತಿ ದಿಢೀರ್ ಸ್ಥಳಾಂತರದ ಉದ್ದೇಶ ಏನು ಎಂಬ ವಿಚಾರಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಉತ್ತರ ನೀಡಬೇಹು.

ಈ ವಿಚಾರ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಯೂ ಮೂಡುತ್ತಿದೆ. ಪ್ರತಿನಿತ್ಯ ದೇವಾಲಯಕ್ಕೆ ಬರುವ ಭಕ್ತರು ದೇವಿಯ ಮೂರ್ತಿ ಕಾಣೆ ಆಗಿರುವ ಕುರಿತು ಪ್ರಶ್ನಿಸುತ್ತಿದ್ದಾರೆ. ಯಾರಿಗೂ ಸಮಂಜಸವಾದ ಉತ್ತರವನ್ನು ದೇವಾಲಯದ ಅಧಿಕಾರಿಗಳು ನೀಡುತ್ತಿಲ್ಲ.