ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಬೇಡಿ -ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಸುವ ಮೂಲಕ ಉರಿವ ಮನೆಯಲ್ಲಿ ಗಳ ಹಿರಿಯುವ ಕೆಲಸ ಆಗುತ್ತಿದೆ ಎಂದು ಜಿಡಿಎಸ್ ವರಿಷ್ಠ ನಾಯಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದರು.

ವಿಧಾನಸಭೆಯಲ್ಲಿ ಗುರುವಾರ ನಿಯಮ-69ರ ಅಡಿಯಲ್ಲಿ ಬೆಲೆ ಏರಿಕೆ ಮೇಲಿನ ಚರ್ಚೆಯಲ್ಲಿ ಹೆಚ್‌ ಡಿಕೆ ಭಾಗವಹಿಸಿ ಮಾತನಾಡಿದರು.

ನೆರೆ, ಕೋವಿಡ್ʼನಿಂದ ಸಾಮಾನ್ಯ ಜನ ತತ್ತರಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ನಿರಂತರ ಬೆಲೆ ಏರಿಕೆಯಿಂದ ರೈತರು, ಬಡವರು ಮತ್ತು ಶ್ರಮಿಕರ ಮನೆಗಳಲ್ಲಿ ಬೆಂಕಿ ಬಿದ್ದಿದೆ. ಆ ಬೆಂಕಿ ಬಿದ್ದಿರುವ ಮನೆಗಳಲ್ಲಿ ಎಷ್ಟು ಗಳ ಹಿರಿಯಬಹುದು ಎಂಬ ಉದ್ದೇಶದಿಂದ ಇಷ್ಟು ತೆರಿಗೆ ಹಾಕಿದಂತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಇಂಧನ ಬೆಲೆ ಏರಿಕೆ ಹಾಗೂ ಕೋವಿಡ್ʼನಿಂದ ತತ್ತರಿಸಿರುವ ಜನರ ಬದುಕು ಮರಳಿ ಕಟ್ಟಿಕೊಳ್ಳಲು ಒಂದೇ ಬಾರಿಗೆ ಅನ್ವಯವಾಗುವಂತೆ 55 ಲಕ್ಷ ಕುಟುಂಬಗಳಿಗೆ ತಲಾ 25 ಸಾವಿರ ರೂ. ಪರಿಹಾರ ನೀಡುವಂತೆ ಅವರು ಸರಕಾರವನ್ನು ಆಗ್ರಹಿಸಿದರು.