ದೇವಾಲಯ ತೆರವು ಕಾರ್ಯಾಚರಣೆ ಸದ್ಯಕ್ಕೆ ಸ್ಥಗಿತ -ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು: ಮೈಸೂರಿನಲ್ಲಿ ಅನಧಿಕೃತ ದೇವಾಲಯ ತೆರವು ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸಿದ್ದೇವೆ ಎಂದು ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಮೈಸೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಎರಡು ದಿನದಲ್ಲಿ ನಡೆಯುವ ಕ್ಯಾಬಿನೆಟ್ ನಲ್ಲಿ ತೆರವು ಕಾರ್ಯಾಚರಣೆ ಬಗ್ಗೆ ಚರ್ಚೆ ಮಾಡಿ ಅಂತಿಮ ಆದೇಶ ಮಾಡುತ್ತೇವೆ. ಸದ್ಯಕ್ಕೆ ಯಾವ ದೇವಾಲಯವೂ ತೆರವು ಕಾರ್ಯಾಚರಣೆ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಮಹದೇವಮ್ಮ ದೇವಸ್ಥಾನ ತೆರವು ಕಾರ್ಯಾಚರಣೆ ಹೇಗಾಯ್ತು, ಎಲ್ಲಿ ಲೋಪ ಇದೆ ಅನ್ನೋದನ್ನು ಅಧಿಕಾರಿಗಳ ಬಳಿ ವಿವರಣೆ ಕೇಳಿದ್ದೇವೆ. ಅಧಿಕಾರಿಗಳ ವಿವರಣೆ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದವರು ಹೇಳಿದರು.

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು. ದೇವಸ್ಥಾನ ತೆರವು ಮಾಡಿದ್ದ ಕಾರಣ ಅವರಿಗೆ ನೋವಾಗಿದೆ. ಅವರ ಪ್ರತಿಭಟನೆ ತಪ್ಪಲ್ಲ. ಇದರಿಂದ ಸರ್ಕಾರಕ್ಕೆ ಯಾವ ಮುಜುಗರವೂ ಇಲ್ಲ ಎಂದು ಸಚಿವ ಸೋಮಶೇಖರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.