ದೇಗುಲ ರಕ್ಷಣೆಗೆ ಮಸೂದೆ: ದೇವಾಲಯಗಳು ಸೇಫ್

ಬೆಂಗಳೂರು: ಸಾಂಸ್ಕೃತಿಕ ನಗರ ಮೈಸೂರು ಸೇರಿದಂತೆ ರಾಜ್ಯದ ಬಹುತೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳ ತೆರವು ತಡೆಯಲು ಪ್ರಸಕ್ತ ಅಧಿವೇಶನದಲ್ಲಿಯೇ ಪ್ರತ್ಯೇಕ ವಿಧೇಯಕ ಮಂಡನೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ಮೈಸೂರಿನ 193 ದೇಗುಲಗಳನ್ನು ತೆರವು ಮಾಡಲು ಮುಂದಾದ ಜಿಲ್ಲಾಡಳಿತವು, ಅನೇಕ ದೇವಾಲಯಗಳನ್ನು ಕೆಡವಿ ಹಾಕಿತ್ತು. ಇದು ಆಡಳಿರೂಢ ಬಿಜೆಪಿ ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನೂ ಕೆರಳಿಸಿತ್ತು.

ವಿಷಯದ ತೀವ್ರತೆಯನ್ನು ಮನಗಂಡು ಎಚ್ಚೆತ್ತ ಸರಕಾರವು, ದೇವಾಲಯಗಳ ರಕ್ಷಣೆಗೆ ಪ್ರತ್ಯೇಕ ವಿಧೇಯಕವನ್ನು ಇದೇ ಅಧಿವೇಶದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ನಿರ್ಧರಿಸಿದೆ. ಅಲ್ಲದೆ, ಸುಪ್ರೀಂ ಕೋರ್ಟ್ʼಗೆ ಮೇಲ್ಮನವಿಯನ್ನೂ ಸಲ್ಲಿಕೆ ಮಾಡಲು ತೀರ್ಮಾನಿಸಿದೆ.

ವಿಧಾನಸೌಧದಲ್ಲಿ ಸೋಮವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ.

ದೇವಾಲಯಗಳ ತೆರವು ಕಾರ್ಯಾಚರಣೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶದ ಬಗ್ಗೆ ಮುಖ್ಯಮಂತ್ರಿಗಳು ಸಂಪುಟ ಸಹೋದ್ಯೋಗಿಗಳ ಜತೆ ವಿಷದವಾಗಿ ಚರ್ಚೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಬಿಜೆಪಿ ನಾಯಕರೇ ಟೀಕಿಸಿದ್ದರು
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಂಸದ ಪ್ರತಾಪ ಸಿಂಹ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ದೇವಾಲಯಗಳ ತೆರವಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಮುಸ್ಲಿಂ, ಕ್ರಿಶ್ಚಿಯನ್ ಪ್ರಾರ್ಥನಾ ಮಂದರಗಳನ್ನು ಬಿಟ್ಟು ಹಿಂದು ದೇವಾಲಯಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಪ್ರತಾಪ್ ಸಿಂಹ ಸರಕಾರದ ವಿರುದ್ಧ ನೇರವಾಗಿ ಕಿಡಿಕಾರಿದ್ದರು. ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿಗೂ ದೂರು ನೀಡಿದ್ದರು.

ದೇವಾಲಯಗಳ ತೆರವು ಕೋಟ್ಯಂತರ ಹಿಂದುಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ಇದಕ್ಕೆ ನಮ್ಮ ಪೂರ್ಣ ವಿರೋಧವಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು ಸಿ.ಟಿ.ರವಿ. ಇದಾದ ಮೇಲೆ ಮೈಸೂರು ಜಿಲ್ಲಾಡಳಿತಕ್ಕೆ ತುರ್ತು ಸೂಚನೆ ನೀಡಿದ್ದ ಸಿಎಂ ಬೊಮ್ಮಾಯಿ, ದೇಗುಲ ತೆರವಿಗೆ ಬ್ರೇಕ್ ಹಾಕಿದ್ದರು.

ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿ ಸಭೆಯ ನಂತರ ಮಾತನಾಡಿದ್ದ ಸಿಎಂ, ಜನರು ಮೆಚ್ಚುವ ರೀತಿಯಲ್ಲಿ ನಾವು ಆಡಳಿತ ನೀಡುತ್ತೇವೆ. ಯಾರೊಬ್ಬರಿಗೂ ತೊಂದರೆ ಆಗದಂತೆ ಸರಕಾರ ನಡೆಸುತ್ತೇವೆ. ಮೈಸೂರಿನಲ್ಲಿ ದೇಗುಲ ತೆರವು ಮಾಡಿದ್ದು ಭಕ್ತರಿಗೆ ತೀವ್ರ ನೋವು ಉಂಟಾಗಿದೆ ಎಂಬುದು ನಮಗೆ ಗೊತ್ತಾಗಿದೆ. ಮುಂದೆ ಇಂಥ ಘಟನೆ ನಡೆಯದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದ್ದರು.

ಇದರ ಜತೆಗೆ, ಮಾಜಿ ಸಿಎಂ ಯಡಿಯೂರಪ್ಪ ಅವರು, ದೇವಾಲಯಗಳ ತೆರವು ಕಾರ್ಯಾಚರಣೆ ತಡೆಗೆ ಸುಪ್ರೀಂ ಕೋರ್ಟ್ʼಗೇ ಮೊರೆ ಹೋಗುವಂತೆ ಸರಕಾರಕ್ಕೆ ಸಲಹೆ ಮಾಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ತರಾಟೆ
ಸರಕಾರ ದಿಢೀರನೇ ದೇಗುಲಗಳ ರಕ್ಷಣೆಗೆ ವಿಧೇಯಕ ಮಂಡಿಸಲು ನಿರ್ಧರಿಸಿರುವುದರ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಒತ್ತಡ ಇದೆ. ದೇವಾಲಯಗಳ ನೆಲಸಮಕ್ಕೆ ಸರಕಾರವೇ ಕುಮ್ಮಕ್ಕು ನೀಡಿದೆ ಎಂದು ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಆರೋಪ ಮಾಡಿದ್ದರು.

ದೇವಾಲಯಗಳ ನೆಲಸಮಕ್ಕೆ ಬಿಜೆಪಿ ಸರಕಾರವೇ ಕಾರಣ. ಒಂದು ಕಡೆ ಅಧಿಕಾರಿಗಳಿಗೆ ಸೂಚನೆ ನೀಡಿ, ಮತ್ತೊಂದು ದೇಗುಲಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಸಿದ್ದರಾಮಯ್ಯ ಟೀಕಾ ಪ್ರಹಾರ ನಡೆಸಿದ್ದರು.