ಬೆಂಗಳೂರು: ಇಂಧನ ದರ ಏರಿಕೆ ಖಂಡಿಸಿ ಶುಕ್ರವಾರ ಕಾಂಗ್ರೆಸ್ ನಾಯಕರು ಟಾಂಗಾ ಟಾಂಗಾ ಗಾಡಿ ಜಾಥಾ ನಡೆಸಿದರು.
ಕಾಂಗ್ರೆಸ್ ನಾಯಕರು ಕೇಂದ್ರ- ರಾಜ್ಯ ಸರ್ಕಾರಕ್ಕೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಲು ತಮ್ಮ ವಿಭಿನ್ನ ಹೋರಾಟವನ್ನು ಇಂದೂ ಮುಂದುವರಿಸಿದ್ದಾರೆ.
ಇಂಧನ ದರ ಏರಿಕೆ ಖಂಡಿಸಿ ಎತ್ತಿನ ಗಾಡಿ ಜಾಥಾ, ಸೈಕಲ್ ಜಾಥಾ ಮಾಡಿದ್ದ ಕಾಂಗ್ರೆಸ್ಸಿಗರು, ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಟಾಂಗಾ ಗಾಡಿ ಮೂಲಕ ವಿಧಾನಸೌಧ ತಲುಪಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರುಗಳ ನೇತೃತ್ವದಲ್ಲಿ ಕ್ವೀನ್ಸ್ ರಸ್ತೆಯಲ್ಲಿನ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಟಾಂಗಾ ಗಾಡಿಯಲ್ಲಿ ವಿಧಾನ ಸೌಧಕ್ಕೆ ತೆರಳಿದರು.
ಕಾರ್ಯಕರ್ತರ ಟಾಂಗಾಗಳಿಗೆ ತಡೆ: ಕಾಂಗ್ರೆಸ್ ನಾಯಕರ ಈ ಪ್ರತಿಭಟನೆಯಿಂದ ಜನದಟ್ಟಣೆ, ಸಂಚಾರ ದಟ್ಟಣೆಯಾದ ಹಿನ್ನೆಲೆಯಲ್ಲಿ ಪೊಲೀಸರು ಕಾಂಗ್ರೆಸ್ ನಾಯಕರು, ಶಾಸಕರಿಗೆ ಮಾತ್ರ ಟಾಂಗದಲ್ಲಿ ಹೋಗಲು ಅವಕಾಶ ನೀಡಿ, ಕಾರ್ಯಕರ್ತರ ಟಾಂಗಾಗಳಿಗೆ ತಡೆಯೊಡ್ಡಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಸರ್ಕಾರ ವಿರುದ್ಧ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ನಮ್ಮ ಮೂರನೇ ಹೋರಾಟ ಇದು. ಇವತ್ತು ಟಾಂಗಾ ಗಾಡಿ ಮೇಲೆ ಬಂದು ಪ್ರತಿಭಟನೆ ಮಾಡಿದ್ದೇವೆ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಮೇಲೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರು, ರೈತರು, ಕಾರ್ಮಿಕರು, ಬಡವರಿಗೆ ಬದುಕು ದುಸ್ತರವಾಗಿದೆ. ಜನರ ಮನೆಗಳಿಗೆ ಬೆಂಕಿ ಬಿದ್ದಿದೆ ಎಂದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ಇಂದು ಇಂಧನ ಸೇರಿದಂತೆ ಅಗತ್ಯ ವಸ್ತುಗಳು, ಮನೆ ನಿರ್ಮಾಣ ಮಾಡುವ ವಸ್ತುಗಳ ಬೆಲೆ ಗಗನಕ್ಕೇರಿದೆ, ಕೊರೊನಾ ಬಂದ ಮೇಲೆ ಜನರ ಆದಾಯ ಕಡಿಮೆಯಾಗಿದೆ ಹೊರತು ಖರ್ಚು ಕಡಿಮೆ ಆಗಿಲ್ಲ. ನಾವು ಎಷ್ಟೇ ಹೇಳಿದರೂ ಎಮ್ಮೆ ಚರ್ಮದ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲವೆಂದರು.

