ಮೈಸೂರು: ಮತಾಂತರ ನಿಷೇಧ ಮಸೂದೆ ತರುವ ಬಗ್ಗೆ ಬಿಷಪ್ ಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ನಗರದ 101 ಗಣಪತಿ ದೇವಸ್ತಾನದಲ್ಲಿ ಶುಕ್ರವಾರ ಪ್ರತಾಪ್ ಸಿಂಹ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಮತಾಂತರ ನಿಷೇಧ ಮಸೂದೆ ತರುವ ಬಗ್ಗೆ ಬಿಷಪ್ ಗಳು ಏಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಸೂದೆ ವಿಚಾರದಲ್ಲಿ ಬಾಲ ಸುಟ್ಟ ಬೆಕ್ಕು ಥರ ಯಾಕೆ ಬಿಷಪ್ ಗಳು ಚಡಪಡಿಸುತ್ತಿದ್ದಾರೆಂದರು.
ನೀವು ಮತಾಂತರವನ್ನು ಮಾಡದೇ ಇದ್ದರೆ ಮಸೂದೆ ಬಂದರೆ ನಿಮಗೆ ಯಾಕೆ ಭಯ? ಮತಾಂತರ ಮಾಡದೇ ಇದ್ದರೆ ನೀವು ಸುಮ್ಮನೆ ಇರಿ. ಮತಾಂತರ ಮಾಡುವವರಿಗೆ ಮಸೂದೆ ಬಿಸಿ ತಟ್ಟುತ್ತದೆಂದು ಪ್ರತಾಪ್ ಸಿಂಹ ಹೇಳಿದರು.
ಕೇರಿ, ಕಾಲೋನಿಗಳಿಗೆ ಹೋಗಿ ಕೆಲವರು ಮತಾಂತರ ಮಾಡುತ್ತಾರೆ. ಕೇರಿ ಕಾಲೋನಿಗೆ ಹೋಗಿ ಕೆಲವರು ಹೆಲ್ತ್ ಸೆಂಟರ್ ಓಪನ್ ಮಾಡಿ ಆ ಮೂಲಕ ಮತಾಂತರಕ್ಕೆ ಸೆಳೆಯುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದರು.
ಕೆಲವರು ಕೇರಿಗಳಿಗೆ ಹೋಗಿ ಗಿಫ್ಟ್ ಕೊಡ್ತಿರಾ? ಜನರನ್ನ ಯಾಕೆ ಮರಳು ಮಾಡುವ ಕೆಲಸ ಮಾಡುತ್ತೀರಾ. ನೀವೂ ಚಿಕಿತ್ಸೆ ಕೊಡಿ, ಅದು ಬಿಟ್ಟು ಮ್ಯಾಜಿಕ್ ಮಾಡಬೇಡಿ. ಚಿಕಿತ್ಸೆ ಕೊಡಬೇಕು ಅಂದ್ರೆ ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಅಂತಾರೆ. ಬಳಿಕ ಚಿಕಿತ್ಸೆ ಕೊಟ್ಟು ಏಸು ಸ್ವಾಮಿಯೇ ಕಾಪಾಡಿದ್ದು ಅಂತೀರಾ. ಹೀಗೆ ಮರಳು ಮಾಡಿ ಮತಾಂತರ ಮಾಡುವುದು ನಡೆದಿದೆ ಎಂದವರು ಹೇಳಿದರು.
ಗೂಳಿಹಟ್ಟಿ ಶೇಖರ್ ಒಬ್ಬ ಜನಪ್ರತಿನಿಧಿ. ಅವರ ತಾಯಿಯೇ ಮತಾಂತರಕ್ಕೆ ಸಿಲುಕಿದ್ದಾರೆ ಎಂದಿದ್ದಾರೆ. ಜನರನ್ನು ಮೋಸ ಮಾಡಿ, ಮರಳು ಮಾಡಿ ಮತಾಂತರ ಮಾಡೋದು ತಪ್ಪು. ನಾನು ಪತ್ರಕರ್ತನಾಗಿದ್ದ ವೇಳೆಯೇ ಮತಾಂತರವನ್ನು ವಿರೋಧಿಸಿದ್ದೆ. ಈಗಲೂ ವಿರೋಧಿಸುತ್ತೇನೆಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಮ್ಮ ಧರ್ಮ ಶ್ರೇಷ್ಠತೆಯನ್ನು ನಂಬಿದವರು. ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ನಮಗೆ ಇದೆ. ರಾಜ್ಯದ ಯತಿಗಳು ಮತಾಂತರದ ವಿರುದ್ದ ಹೋರಾಟ ಮಾಡಬೇಕು ಎಂದು ಪ್ರತಾಪ್ ಸಿಂಹ ಕರೆ ನೀಡಿದರು.
ಮೈಸೂರು ಜಿಲ್ಲೆಯ ಹುಣಸೂರು ಭಾಗದಲ್ಲಿ ಮತಾಂತರ ನಡೆಯುತ್ತಿದೆ. ಮೈಸೂರು ಭಾಗದಲ್ಲಿ ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮತಾಂತರ ನಡೆಯುತ್ತಿದೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಸದ ಪ್ರತಾಪ್ ಸಿಂಹ, ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮತಾಂತರ ನಡೆದರೂ ನಾವು ಬಿಡಲ್ಲ. ಎಲ್ಲೇ ಮತಾಂತರ ನಡೆದರೂ ಅದನ್ನು ಮಟ್ಟ ಹಾಕುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ನಮ್ಮ ಧರ್ಮದ ಮಠಾಧೀಶರು ಈ ಬಗ್ಗೆ ಗಮನಹರಿಸಿ ಮತಾಂತರಕ್ಕೆ ಜನ ಒಳಗಾಗದಂತೆ ತಡೆಯಬೇಕು ಎಂದರು.
ದೇವಸ್ಥಾನ ಉಳಿಸುವ ಬಿಲ್ ಮಂಡಿಸಿದ್ದಕ್ಕೆ ಪೂಜೆ: ದೇವಾಲಯಗಳು ಉಳಿಯಬೇಕೆಂಬ ಕೋರಿಕೆ ನೆರವೇರಿದ್ದರಿಂದ ಶುಕ್ರವಾರ 101 ಗಣಪತಿಗೆ ಪೂಜೆ ಸಲ್ಲಿಸಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ನಮಗೆ ಒಳ್ಳೆಯ ಸಿಎಂ ಸಿಕ್ಕಿದ್ದಾರೆ. ನಮ್ಮ ಭಾವನೆ ಆರ್ಥ ಮಾಡಿಕೊಂಡು ದೇವಸ್ಥಾನ ಉಳಿಸುವ ಬಿಲ್ ಮಂಡಿಸಿ ಪಾಸ್ ಮಾಡಿದ್ದಾರೆ. ಕೇವಲ 10 ದಿನದಲ್ಲಿ ಕಾಯ್ದೆ ಮೂಲಕ ದೇವಸ್ಥಾನ ರಕ್ಷಣೆ ಮಾಡುವ ಕೆಲಸವನ್ನು ಸಿಎಂ ಮಾಡಿದ್ದಾರೆಂದರು.
ನಂಜನಗೂಡು ತಾಲ್ಲೂಕಿನ ಉಚ್ಚಗಣ್ಣಿ ದೇವಸ್ಥಾನವನ್ನು ಅಲ್ಲಿಂದ ಸ್ಪಲ್ಪ ದೂರದಲ್ಲಿ ಸಾರ್ವಜನಿಕರು ಹಾಗೂ ಸರ್ಕಾರ ದೇಣಿಗೆಯಿಂದ ಮರು ಸ್ಥಾಪನೆ ಮಾಡುತ್ತೇವೆ. ಇದೆಲ್ಲಾ ಸಾಧ್ಯವಾಗಿದ್ದು ಗಣಪತಿ ಕೃಪೆಯಿಂದ ಎಂದರು.
ಉಚ್ಚಗಣಿ ದೇಗುಲದ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲು ಸಿಎಂ ಬಸವರಾಜಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಬರುತ್ತಾರೆಂದು ಅವರು ಹೇಳಿದರು.
ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

