ಉಪ ಚುನಾವಣೆಯಲ್ಲಿ ಜೆಡಿಎಸ್ ಸೋಲಿಸಲು ಕಾಂಗ್ರೆಸ್ ಷಡ್ಯಂತ್ರ; ಸಿದ್ದರಾಮಯ್ಯ ಕುಲಗೆಟ್ಟ ರಾಜಕೀಯ ಮಾಡುತ್ತಿದ್ದಾರೆ -ಹೆಚ್ ಡಿಕೆ

ಚನ್ನಪಟ್ಟಣ: ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಸೋಲಿಸಲು ಕಾಂಗ್ರೆಸ್ ನಾಯಕರು ಅಪಪ್ರಚಾರ ನಡೆಸುತ್ತಿದ್ದು, ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಚನ್ನಪಟ್ಟಣದಲ್ಲಿ ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ವೇಳೆ ಹೆಚ್ ಡಿಕೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಬಿಟ್ಟು ಮಾತನಾಡಲು ಬೇರೆ ವಿಷಯ ಇಲ್ಲ. ಅವರ ರಾಜಕೀಯ ನನಗೆ ಬೇಸರ ತರಿಸಿದೆ ಎಂದು ಅವರು ಹೇಳಿದರು.

ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಅಂತಾರೆ. ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿದ್ದಾರೆ ಅಂತಾರೆ. ಆರೋಪಗಳಿಗೂ ಒಂದು ಮಿತಿ ಬೇಡವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಸಿದ್ದರಾಮಯ್ಯ ಅವರು ಪದೇ ಪದೇ ನಿಮ್ಮ ಮೇಲೆ ದೂರುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರ ರೀತಿ ಕುಲಗೆಟ್ಟ ರಾಜಕೀಯ ನಾನು ಮಾಡುವುದಿಲ್ಲ. ಅಲ್ಪಸಂಖ್ಯಾತರು ಜೆಡಿಎಸ್ ಗೆಲ್ಲುವ ಕಡೆ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ, ಕಾಂಗ್ರೆಸ್ ಗೆಲ್ಲುವ ಕಡೆ ಆ ಪಕ್ಷಕ್ಕೆ ಮತ ಹಾಕಿ ಎಂದು ನಾನು ಹೇಳಿರುವುದು ನಿಜ ಎಂದರು.

ಜೆಡಿಎಸ್ ಕಾರ್ಯಾಗಾರದಲ್ಲಿ ನಾನೇ ಹೇಳಿದ್ದೆ. ಜೆಡಿಎಸ್ ಪಕ್ಷ ಎಲ್ಲಿ ಸ್ಟ್ರಾಂಗ್ ಇದೆ ಅಲ್ಲಿ ಪಕ್ಷ ಬೆಂಬಲಿಸಿ. ಎಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮುಂದೆ ಇದೆ ಅಲ್ಲಿ ಅಲ್ಪಸಂಖ್ಯಾತ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಅಂತಾ ಮುಕ್ತವಾಗಿ ಹೇಳಿದ್ದೇನೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಈ ಹೃದಯ ವೈಶಾಲ್ಯತೆ ಇಲ್ಲ. ಅದರ ಬದಲಿಗೆ ನಮ್ಮ ಪಕ್ಷವನ್ನೇ ಮುಗಿಸುವ ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ ಎಂದು ಹೆಚ್ ಡಿಕೆ ತಿಳಿಸಿದರು.

ರಾಜ್ಯದಲ್ಲಿ ಜ್ಯಾತ್ಯತೀತ ಶಕ್ತಿಗಳು ಉಳಿಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನ ಬೆಂಬಲಿಸಿ ಅಂತಾ ಹೇಳಿದ್ದೇನೆ. ಆದರೆ, ಸಿದ್ದರಾಮಯ್ಯ ಅವರು ಜೆಡಿಎಸ್ ಪಕ್ಷದ ವಿರುದ್ಧ ಅಪಪ್ರಚಾರ ಮಾಡಿ ತಮ್ಮ ಕೀಳುಮಟ್ಟದ ರಾಜಕೀಯ ಏನೂ ಎಂಬುದನ್ನು ಪ್ರದರ್ಶನ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಆರ್.ಎಸ್.ಎಸ್ ಬಗ್ಗೆ ನೀಡಿರುವ ಹೇಳಿಕೆಗೆ ಬದ್ಧ
ಆರ್ ಎಸ್ ಎಸ್ ಎಸ್ ಬಗ್ಗೆ ನಾನು ಕೊಟ್ಟಿರುವ ಹೇಳಿಕೆಗೆ ಬದ್ಧನಾಗಿದ್ದೇನೆ. ವಾಸ್ತವ ಸಂಗತಿಗಳನ್ನು ಮಾತ್ರ ಹೇಳಿದ್ದೇನೆ. ಆರ್.ಎಸ್.ಎಸ್ ಪ್ರಚಾರಕರೊಬ್ಬರು ಹೇಳಿರುವ ಮಾತುಗಳನ್ನು ನಾನು ಉಲ್ಲೇಖ ಮಾಡಿದ್ದೇನೆ. ಬೇಕಿದ್ದರೆ ನನ್ನ ಹೇಳಿಕೆ ವಿರೋಧ ಮಾಡುವವರು ಸಾರ್ವಜನಿಕವಾಗಿ ಚರ್ಚೆಗೆ ಬರಲಿ. ನಾನು ಸಿದ್ದನಿದ್ದೇನೆ. ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ಬರಲಿ ಎಂದು ಹೆಚ್ ಡಿಕೆ ಅವರು ಹೇಳಿದರು.

ಸ್ವಾತಂತ್ರ್ಯ ಬಂದಾಗ ಆರ್.ಎಸ್.ಎಸ್ ಇಲ್ಲದಿದ್ದರೆ ಭಾರತವು ಪಾಕಿಸ್ತಾನ ಆಗುತಿತ್ತು ಎಂದು ಸಚಿವ ಕೆ ಎಸ್ ಈಶ್ವರಪ್ಪ ಹೇಳಿರುವ ಬಗ್ಗೆ ಪ್ರಶ್ನಿಸಿದಾಗ, ಸ್ವಾತಂತ್ರ್ಯ ಬಂದಾಗ ಈಶ್ವರಪ್ಪ ಅವರು ಹುಟ್ಟಿದ್ದರಾ? ಯಾರ ಯಾರ ಕೊಡುಗೆ ಏನ್ ಏನೇನು ಇದೆ ಎಂದು ಈಶ್ವರಪ್ಪ ಅವರಿಗೇನು ಗೊತ್ತು? ಎಂದು ಟಾಂಗ್ ಕೊಟ್ಟರು.

ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ
ಹಾನಗಲ್ ಮತ್ತು ಸಿಂದಗಿ ಉಪ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಎರಡು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇದೆ. ಸಿಂದಗಿಯಲ್ಲಿ ನಮ್ಮ ಅಭ್ಯರ್ಥಿ ಗೆಳ್ಳುವುದು ಖಚಿತ. ಹಾನಗಲ್ ನಲ್ಲಿ ಗಟ್ಟಿ ಪೈಪೆÇೀಟಿ ನೀಡಲಿದ್ದೇವೆ ಹಾಗೂ ಅಲ್ಲಿಯೂ ನಮ್ಮ ಪರವಾಗಿಯೇ ಅಲೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿಕೆ ಹೇಳಿದರು.